ADVERTISEMENT

ತಮಿಳುನಾಡು ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಏಳು ಮಹಿಳೆಯರ ಸಾವು

ಇಬ್ಬರಿಗೆ ಗಾಯ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 20:26 IST
Last Updated 4 ಸೆಪ್ಟೆಂಬರ್ 2020, 20:26 IST
ತಮಿಳುನಾಡಿನ ಕಡ್ಡಲೂರು ಜಿಲ್ಲೆಯಲ್ಲಿ ಪಟಾಕಿ ಕಾರ್ಖಾನೆಯೊಂದು ಸ್ಫೋಟಗೊಂಡ ಪರಿಣಾಮ ಏಳು ಮಹಿಳೆಯರು ಸಾವನ್ನಪ್ಪಿದ್ದಾರೆ
ತಮಿಳುನಾಡಿನ ಕಡ್ಡಲೂರು ಜಿಲ್ಲೆಯಲ್ಲಿ ಪಟಾಕಿ ಕಾರ್ಖಾನೆಯೊಂದು ಸ್ಫೋಟಗೊಂಡ ಪರಿಣಾಮ ಏಳು ಮಹಿಳೆಯರು ಸಾವನ್ನಪ್ಪಿದ್ದಾರೆ   

ಚೆನ್ನೈ: ತಮಿಳುನಾಡಿನ ಕಡ್ಡಲೂರು ಜಿಲ್ಲೆಯಲ್ಲಿ ಶುಕ್ರವಾರ ಪಟಾಕಿ ಕಾರ್ಖಾನೆಯ ಘಟಕವೊಂದು ಸ್ಫೋಟಗೊಂಡ ಪರಿಣಾಮ ಘಟಕದ ಮಾಲೀಕರಾದ ಗಾಂಧಿಮತಿ ಮತ್ತು ಆಕೆಯ ಸಂಬಂಧಿ ಸೇರಿ ಏಳು ಮಹಿಳೆಯರು ಸಾವನ್ನಪ್ಪಿದ್ದು, ಇಬ್ಬರು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಚೆನ್ನೈನಿಂದ 245 ಕಿ.ಮೀ ದೂರವಿರುವ ಕಟ್ಟುಮನ್ನಾರ್‌ಕೋಯಿಲ್ ಬಳಿಯ ಕುರುಂಗುಡಿ ಗ್ರಾಮದ ಪಟಾಕಿ ಉತ್ಪಾದನಾ ಘಟಕದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಾವನ್ನಪ್ಪಿದವರ ಬಗ್ಗೆ ಶೋಕ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮೃತರ ಕುಟುಂಬಗಳಿಗೆ ತಲಾ ₹ 2ಲಕ್ಷ ಪರಿಹಾರ ಘೋಷಿಸಿದ್ದಾರೆ.

‘ಸ್ಫೋಟ ಸಂಭವಿಸಿದ ಸ್ಥಳದಲ್ಲೇ ಐವರು ಮಹಿಳೆಯರು ಸಾವನ್ನಪ್ಪಿದರು. ಕಟ್ಟಡದ ಕಾಂಕ್ರೀಟ್ ಅಡಿಯಲ್ಲಿ ಸಿಲುಕಿದ್ದ ನಾಲ್ವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮಹಿಳೆಯರು ಸಾವನ್ನಪ್ಪಿದರು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಸ್ಫೋಟ ಬೆಂಕಿಯಿಂದ ಸಂಭವಿಸಿಲ್ಲ. ಬಹುಶಃ ನೈಟ್ರೇಟ್‌ನಂತಹ ಕೆಲ ರಾಸಾಯನಿಕಗಳನ್ನು ಪಟಾಕಿ ಉತ್ಪಾದನಾ ಘಟಕದಲ್ಲಿ ಸಂಗ್ರಹಿಸಿಡಲಾಗಿತ್ತು. ಸ್ಫೋಟದ ಹಿಂದಿನ ಕಾರಣ ಪತ್ತೆ ಹಚ್ಚಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಶ್ರೀಅಭಿನವ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.