ADVERTISEMENT

ಮತ್ತೆ 84 ರೈಲುಗಳ ಸಂಚಾರ ರದ್ದು

ಮಾರ್ಚ್‌ 31ರವರೆಗೆ ಒಟ್ಟು 151 ರೈಲುಗಳ ಸಂಚಾರ ಸ್ಥಗಿತ

ಪಿಟಿಐ
Published 19 ಮಾರ್ಚ್ 2020, 22:46 IST
Last Updated 19 ಮಾರ್ಚ್ 2020, 22:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೊರೊನಾ ವೈರಸ್‌ ಸೋಂಕು ಹಾಗೂ ಪ್ರಯಾಣಿಕರಿಲ್ಲದೇ ಇರುವ ಕಾರಣ ಶುಕ್ರವಾರದಿಂದಇದೇ 31ರವರೆಗೆ 84 ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ಗುರುವಾರ ರದ್ದುಗೊಳಿಸಿದೆ.

ಈ ಮೂಲಕ ರದ್ದುಗೊಂಡ ಒಟ್ಟು ರೈಲುಗಳ ಸಂಖ್ಯೆ 151ಕ್ಕೆ ಏರಿಕೆಯಾಗಿದೆ. ‘ಈ ರೈಲುಗಳಲ್ಲಿ ಟಿಕೆಟ್‌ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ರೈಲು ರದ್ದುಗೊಂಡಿರುವ ಮಾಹಿತಿಯನ್ನು ನೀಡಲಾಗುತ್ತಿದ್ದು, ಪ್ರಯಾಣಿಕರಿಗೆ ಟಿಕೆಟ್‌ ಹಣ ವಾಪಸ್‌ ನೀಡಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮುಂಜಾಗ್ರತಾ ಕ್ರಮವಾಗಿ ಜ್ವರ, ಶೀತ ಅಥವಾ ಉಸಿರಾಟದ ಸಮಸ್ಯೆ ಇರುವ ಯಾವ ಸಿಬ್ಬಂದಿಯೂ ಊಟ, ತಿಂಡಿ ವಿತರಿಸುವ ವಹಿವಾಟು ನಡೆಸದಂತೆ ಸೂಚಿಸಲು ಆಯಾ ವಲಯಗಳ ಕ್ಯಾಟರಿಂಗ್‌ ವಿಭಾಗಕ್ಕೆ ರೈಲ್ವೆ ಇಲಾಖೆ ಸೂಚಿಸಿದೆ.

ADVERTISEMENT

ಎಸಿ ರೈಲುಗಳ ಸಂಚಾರ ಸ್ಥಗಿತ: ಮುಂಜಾಗ್ರತಾ ಕ್ರಮವಾಗಿ ಮುಂಬೈನಲ್ಲಿ 28 ಹವಾನಿಯಂತ್ರಿತ (ಎಸಿ) ರೈಲುಗಳ ಸಂಚಾರ ಸ್ಥಗಿತಗೊಳಿಸಲು ಕೇಂದ್ರ ಹಾಗೂ ಪಶ್ಚಿಮ ರೈಲ್ವೆ ನಿರ್ಧರಿಸಿದೆ. ‘ಎಸಿ ರೈಲುಗಳ ಬದಲಾಗಿ ಸಾಮಾನ್ಯ ರೈಲುಗಳೇ ಕಾರ್ಯಾಚರಣೆ ನಡೆಸಲಿವೆ. ಮಾರ್ಚ್‌ ಅಂತ್ಯದವರೆಗೆ ಇದು ಜಾರಿಯಲ್ಲಿರಲಿದೆ’ ಎಂದು ವಿಭಾಗದ ವಕ್ತಾರರೊಬ್ಬರು ತಿಳಿಸಿದರು

ಠಸ್ಸೆ ಇದ್ದವರು ರೈಲಿನಿಂದ ಹೊರಗೆ

ಸೌರಾಷ್ಟ್ರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಇಲ್ಲಿಂದ ಗುಜರಾತ್‌ಗೆ ಹೊರಟಿದ್ದ ಆರು ಪ್ರಯಾಣಿಕರನ್ನು ಬೋರಿವಲಿ ರೈಲು ನಿಲ್ದಾಣದಲ್ಲೇ ರೈಲಿನಿಂದ ಕೆಳಗಿಳಿಸಿದ ಘಟನೆ ನಡೆದಿದೆ.

ಈ ಆರೂ ಜನರು ಇತ್ತೀಚೆಗಷ್ಟೇಸಿಂಗಪುರದಿಂದ ಭಾರತಕ್ಕೆ ಮರಳಿದ್ದರು. ಮುಂಜಾಗ್ರತಾ ಕ್ರಮವಾಗಿ 14 ದಿನ ಮನೆ ಬಿಟ್ಟು ಹೊರಹೋಗದಂತೆ ಸರ್ಕಾರ ಅವರ ಕೈಗೆ ಠಸ್ಸೆ ಹಾಕಿತ್ತು. ಈ ಸೂಚನೆಯನ್ನು ಉಲ್ಲಂಘಿಸಿ ಅವರು ವಡೋದರಕ್ಕೆ ಪ್ರಯಾಣ ಬೆಳೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.