ಪ್ರಧಾನಿ ನರೇಂದ್ರ ಮೋದಿ
(ಪಿಟಿಐ ಚಿತ್ರ)
ನವದೆಹಲಿ: 2015ರವರೆಗೆ ಸರ್ಕಾರಿ ಯೋಜನೆಗಳು 25 ಕೋಟಿಗಿಂತ ಕಡಿಮೆ ಜನರನ್ನು ತಲುಪುತ್ತಿದ್ದವು. ಆದರೆ ಇಂದು ದೇಶದ ಸುಮಾರು 95 ಕೋಟಿ ಜನ ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಲ್ಒ) ವರದಿಯನ್ನು ಉಲ್ಲೇಖಿಸಿದ್ದಾರೆ. ಭಾರತದ ಜನಸಂಖ್ಯೆಯ ಶೇ 64ಕ್ಕಿಂತ ಹೆಚ್ಚು ಜನ ಈಗ ಒಂದಲ್ಲ ಒಂದು ಸಾಮಾಜಿಕ ಭದ್ರತಾ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಆರೋಗ್ಯದಿಂದ ಸಾಮಾಜಿಕ ಭದ್ರತೆಯವರೆಗೆ.. ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿದೆ. ಇದು ಸಾಮಾಜಿಕ ನ್ಯಾಯದ ಒಂದು ಉತ್ತಮ ಚಿತ್ರಣವೂ ಆಗಿದೆ. ಈ ಯಶಸ್ಸು ಮುಂಬರುವ ದಿನಗಳು ಉತ್ತಮವಾಗಿರುತ್ತವೆ ಎಂಬ ನಂಬಿಕೆಯನ್ನು ಹುಟ್ಟುಹಾಕಿದೆ. ಭಾರತ ಪ್ರತಿ ಹಂತದಲ್ಲೂ ಇನ್ನಷ್ಟು ಬಲಿಷ್ಠವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತವನ್ನು ಟ್ರಾಕೋಮಾ(ಕಣ್ಣಿನ ಕಾಯಿಲೆ) ಮುಕ್ತ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿರುವುದನ್ನು ಮೈಲಿಗಲ್ಲು ಎಂದ ಪ್ರಧಾನಿ ಈ ಯಶಸ್ಸಿಗೆ ಆರೋಗ್ಯ ಕಾರ್ಯಕರ್ತರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಸೋಂಕು ನಿರ್ಮೂಲನೆಗೆ 'ಸ್ವಚ್ಛ ಭಾರತ ಅಭಿಯಾನ' ಮತ್ತು 'ಜಲ ಜೀವನ್ ಮಿಷನ್' ಕೊಡುಗೆ ನೀಡಿವೆ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.