ಬಂಧನ
(ಪ್ರಾತಿನಿಧಿಕ ಚಿತ್ರ)
ಲಖನೌ: ‘ಕ್ರಿಮಿನಲ್ ಪ‍್ರಕರಣಗಳ ತ್ವರಿತ ಇತ್ಯರ್ಥಕ್ಕೆ ಉತ್ತರಪ್ರದೇಶ ಸರ್ಕಾರ ಜಾರಿಗೊಳಿಸಿದ ‘ಆಪರೇಷನ್ ಕನ್ವಿಕ್ಷನ್’ ಅಭಿಯಾನದ ಅಡಿಯಲ್ಲಿ ಕಳೆದೆರಡು ವರ್ಷಗಳಲ್ಲಿ 97 ಸಾವಿರ ಮಂದಿಗಳನ್ನು ಅಪರಾಧಿಗಳು ಎಂದು ಘೋಷಿಸಿ, ಶಿಕ್ಷೆಗೆ ಗುರಿಪಡಿಸಲಾಗಿದೆ’ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ, ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುವ ವೇಳೆ ವಿಶೇಷ ವಕೀಲರನ್ನು ನೇಮಿಸಿ, ತ್ವರಿತವಾಗಿ ಪೂರಕ ಸಾಕ್ಷ್ಯಗಳನ್ನು ಒದಗಿಸಿ, ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಗೆ ಒಳಪಡಿಸಲು ಸರ್ಕಾರ ಈ ಅಭಿಯಾನದಡಿಯಲ್ಲಿ ನಿರ್ಧಾರ ಕೈಗೊಂಡಿತ್ತು.
‘2023ರ ಜುಲೈ 1ರಂದು ಆರಂಭಿಸಿದ ‘ಆಪರೇಷನ್ ಕನ್ವಿಕ್ಷನ್’ ಅಭಿಯಾನವು ಈ ವರ್ಷದ ಜೂನ್ ಮಧ್ಯಭಾಗದವರೆಗೆ 97,158 ಮಂದಿಗೆ ಶಿಕ್ಷೆ ವಿಧಿಸಲು ಕಾರಣವಾಗಿದೆ’ ಎಂದು ಪ್ರಾಸಿಕ್ಯೂಷನ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದೀಪೇಶ್ ಜುನೇಜಾ ತಿಳಿಸಿದ್ದಾರೆ.
‘1,14,029 ಪ್ರಕರಣಗಳನ್ನು ಗುರುತಿಸಿ, 74,388 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಅಭಿಯಾನದಡಿ 68 ಅಪರಾಧಿಗಳಿಗೆ ಗಲ್ಲು ಶಿಕ್ಷೆ, 8,172 ಮಂದಿ ಜೀವಾವಧಿ ಶಿಕ್ಷೆ, 1,453 ಮಂದಿಗೆ 20 ವರ್ಷ ಜೈಲು ಹಾಗೂ 87,465 ಮಂದಿ 20 ವರ್ಷದವರೆಗೂ ಶಿಕ್ಷೆಗೆ ಗುರಿಯಾಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
‘ಗಂಭೀರ ಪ್ರಕರಣಗಳಲ್ಲಿ ತ್ವರಿತ ಹಾಗೂ ನಿರ್ಣಾಯಕ ನ್ಯಾಯ ಒದಗಿಸಿರುವುದು ಸರ್ಕಾರದ ಅಂಕಿಅಂಶಗಳಿಂದ ದೃಢಪಟ್ಟಿದೆ. ಸಂಘಟಿತ ಅಪರಾಧಗಳ 272 ಪ್ರಕರಣಗಳಲ್ಲಿ 395 ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗಿದ್ದು, ಇದರಲ್ಲಿ ಪ್ರಮುಖ 10 ಕ್ರಿಮಿನಲ್‌ಗಳು ಸೇರಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.
‘ಮಾಫಿಯಾಗಳನ್ನು ಮಟ್ಟಹಾಕುವ ವಿಚಾರದಲ್ಲಿ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. 69 ಮಾಫಿಯಾಗಳ ಪೈಕಿ 29 ಮಂದಿ ಶಿಕ್ಷೆಗೆ ಗುರಿಯಾಗಿದ್ದಾರೆ. ಆ ಮೂಲಕ ಸಣ್ಣ ಅಪರಾಧ ಕೃತ್ಯ ಮಾಡುವವರಲ್ಲದೇ, ದೊಡ್ಡ ಪ್ರಮಾಣದ ಅಪರಾಧಿಗಳೂ ಶಿಕ್ಷೆಗೆ ತುತ್ತಾಗಿದ್ದಾರೆ’ ಎಂದು ತಿಳಿಸಿದ್ದಾರೆ.
ಮಕ್ಕಳ ಹಿಂಸಾಕೋರರಿಗೆ ಕಠಿಣ ಶಿಕ್ಷೆ:
ಮಕ್ಕಳ ಮೇಲೆ ಅಪರಾಧ ಕೃತ್ಯವೆಸಗುವವರಿಗೂ ಅಭಿಯಾನದಡಿಯಲ್ಲಿ ಕಠಿಣ ಶಿಕ್ಷೆ ವಿಧಿಸಲಾಗಿದೆ. ‘ಪೋಕ್ಸೊ ಕಾಯ್ದೆ’ ಅಡಿಯಲ್ಲಿ ಈ ತಿಂಗಳಲ್ಲಿಯೇ ಮೂರು ಮಂದಿ ಸೇರಿದಂತೆ ಒಟ್ಟು 17 ಮಂದಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. 619 ಮಂದಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.
‘ಮರಣದಂಡನೆ ಶಿಕ್ಷೆಗೆ ಗುರಿಯಾದ ಒಟ್ಟು ಒಟ್ಟು 68 ಪೈಕಿ 17 ಮಂದಿ ಪೋಕ್ಸೊ ಕಾಯ್ದೆ ಅಡಿಯಲ್ಲಿ ಶಿಕ್ಷೆಗೆ ಒಳಗಾಗಿದ್ದರೆ, ಘೋರ ಅಪರಾಧವೆಸಗಿದ 48 ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ. ಸರಾಸರಿಯಲ್ಲಿ ನಿತ್ಯವೂ 143 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 187 ಮಂದಿ ಕ್ರಿಮಿನಲ್‌ಗಳು ರಾಜ್ಯದಾದ್ಯಂತ ಶಿಕ್ಷೆಗೆ ಗುರಿಯಾಗಿದ್ದಾರೆ’ ಎಂದು ದೀಪೇಶ್ ಜುನೇಜಾ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.