ADVERTISEMENT

ಕೋವಿಡ್‌: ಭಾರತದಿಂದ 10 ದಿನ ವಿಮಾನಗಳ ಹಾರಾಟ ನಿರ್ಬಂಧಿಸಿದ ಯುಎಇ

ಏಜೆನ್ಸೀಸ್
Published 22 ಏಪ್ರಿಲ್ 2021, 16:53 IST
Last Updated 22 ಏಪ್ರಿಲ್ 2021, 16:53 IST
ದುಬೈ ವಿಮಾನ–ಸಾಂದರ್ಭಿಕ ಚಿತ್ರ
ದುಬೈ ವಿಮಾನ–ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಭಾರತದಿಂದ ವಿಮಾನಗಳ ಹಾರಾಟ ಸ್ಥಗಿತಗೊಳಿಸಲು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ನಿರ್ಧರಿಸಿದೆ.

ಏಪ್ರಿಲ್‌ 25ರಿಂದ ಭಾರತದಿಂದ ಎಲ್ಲ ವಿಮಾನಗಳ ಹಾರಾಟ ಕಾರ್ಯಾಚರಣೆಯನ್ನು ಹತ್ತು ದಿನಗಳ ವರೆಗೂ ರದ್ದುಪಡಿಸುವುದಾಗಿ ಗುರುವಾರ ಯುಎಇ ಪ್ರಕಟಿಸಿದೆ. ಭಾರತದಿಂದ ಅತಿ ಹೆಚ್ಚು ವಿಮಾನಗಳು ಯುಎಇ ಮಾರ್ಗದಲ್ಲಿ ಸಂಚರಿಸುತ್ತವೆ.

ಭಾರತದಿಂದ ಪ್ರಯಾಣಿಕರು ಬೇರೆ ರಾಷ್ಟ್ರಗಳ ಮೂಲಕ ಯುಎಇ ಪ್ರವೇಶಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಪ್ರಯಾಣಿಕರು ಇತರೆ ರಾಷ್ಟ್ರಗಳಲ್ಲಿ 14 ದಿನಗಳು ತಂಗಿದ್ದರೆ, ನಂತರದಲ್ಲಿ ಯುಎಇ ಪ್ರವೇಶಕ್ಕೆ ಅವಕಾಶ ಸಿಗಲಿದೆ.

ADVERTISEMENT

ಉಭಯ ರಾಷ್ಟ್ರಗಳ ನಡುವೆ ಕಾರ್ಗೊ ವಿಮಾನಗಳು ಹಾಗೂ ಯುಎಇನಿಂದ ಭಾರತಕ್ಕೆ ಬಂದಿಳಿಯುವ ವಿಮಾನಗಳ ಮೇಲೆ ನಿರ್ಬಂಧ ಇರುವುದಿಲ್ಲ. ಯುಎಇ ನಾಗರಿಕರು, ರಾಜತಾಂತ್ರಿಕ ಪ್ರತಿನಿಧಿಗಳು, ಸರ್ಕಾರದ ಪ್ರತಿನಿಧಿಗಳು ಹಾಗೂ ಉದ್ಯಮಿಗಳ ವಿಮಾನಗಳಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

ಆ ಎಲ್ಲ ವರ್ಗದ ಪ್ರಯಾಣಿಕರು ಯುಎಇಗೆ ಬಂದಿಳಿಯುವ ದಿನದಂದು ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಕಡ್ಡಾಯವಾಗಿ 10 ದಿನಗಳು ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ.

ಕೋವಿಡ್ ಪ್ರಕರಣ ಹಿನ್ನೆಲೆಯಲ್ಲಿ ಭಾರತದಿಂದ ದೇಶಕ್ಕೆ ಸಂಪರ್ಕ ಕಲ್ಪಿಸುವ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸಲು ಆಸ್ಟ್ರೇಲಿಯಾ ಸರ್ಕಾರ ನಿರ್ಧರಿಸಿದೆ. ಅಂತರರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಿಸಿ ಭಾರತವನ್ನು ಬ್ರಿಟನ್‌ ‘ಕೆಂಪುಪಟ್ಟಿಗೆ’ ಸೇರಿಸಿದ ಹಿಂದೆಯೇ, ಲಂಡನ್‌ನ ಅತಿದೊಡ್ಡ ವಿಮಾನನಿಲ್ದಾಣ 'ಹೀಥ್ರೂ' ಆಡಳಿತ ವರ್ಗವು, ಭಾರತದಿಂದ ಹೆಚ್ಚುವರಿ ವಿಮಾನಗಳ ಆಗಮನಕ್ಕೆ ಅವಕಾಶವನ್ನು ನಿರಾಕರಿಸಿದೆ. ಕೆಂಪುಪಟ್ಟಿಗೆ ಸೇರಿಸಿದ ಆದೇಶ ಶುಕ್ರವಾರದಿಂದ ಜಾರಿಗೆ ಬರಲಿದೆ. ಏರ್‌ ಇಂಡಿಯಾ ಭಾರತ ಮತ್ತು ಬ್ರಿಟನ್‌ ನಡುವಿನ ಹಾರಾಟವನ್ನು ಏಪ್ರಿಲ್‌ 24ರಿಂದ ಏಪ್ರಿಲ್‌ 30ರ ವರೆಗೂ ರದ್ದು ಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.