ADVERTISEMENT

6 ದಿನದ ದಾಂಪತ್ಯ, 26 ವರ್ಷ ಕೋರ್ಟ್‌ ‘ಸಾಂಗತ್ಯ‘: ಹೀಗೊಂದು ವಿಚ್ಛೇದನ ಪ್ರಕರಣ!

‘ಒಟ್ಟಿಗೆ’ ಜೀವಿಸಲು ಆಗದಿದ್ದರೆ, ಬೇರೆಯಾಗುವುದೇ ಲೇಸು –ಸುಪ್ರೀಂ ಕೋರ್ಟ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 14:31 IST
Last Updated 3 ಅಕ್ಟೋಬರ್ 2021, 14:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 1995ರಲ್ಲಿ ವಿವಾಹವಾಗಿದ್ದ ಆ ಜೋಡಿಯ ‘ದಾಂಪತ್ಯ ಜೀವನದ‘ ಅವಧಿ 5–6 ದಿನಗಳಷ್ಟೇ. ಮನೆ ಅಳಿಯನಾಗಿರು ಎಂಬುದು ಪತ್ನಿಯ ಪಟ್ಟು. ವಯಸ್ಸಾದ ತಾಯಿ, ನಿರುದ್ಯೋಗಿ ತಮ್ಮನ ಬಿಟ್ಟು ಬರುವುದಿಲ್ಲ ಎಂಬುದು ಆತನ ಮಾತು. ವಿಷಯ ಕೋರ್ಟ್‌ ಮೆಟ್ಟಿಲೇರಿತು. ಈಗ ಪತಿಗೆ 55, ಪತ್ನಿಗೆ 50 ವರ್ಷ.

ಸುಪ್ರೀಂ ಕೋರ್ಟ್‌ನ ಎದುರು ಈ ಪ್ರಕರಣ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿಗಳಾದ ಎಂ.ಆರ್.ಶಾ, ಎ.ಎಸ್‌.ಬೋಪಣ್ಣ ಅವರಿದ್ದ ನ್ಯಾಯಪೀಠವು ದಂಪತಿಗೆ ಸ್ಪಷ್ಟವಾಗಿ ಹೇಳಿದ್ದು: ನಿಮ್ಮಿಬ್ಬರಿಗೂ ‘ಒಟ್ಟಿಗೆ’ ಜೀವಿಸಲು ಆಗುವುದೇ ಇಲ್ಲ ಎಂದಾದರೆ, ‘ಪ್ರತ್ಯೇಕವಾಗಿ‘ ವಾಸಿಸುವುದೇ ಲೇಸು.

‘ನೀವು ಇಡೀ ಬದುಕನ್ನು ಕೋರ್ಟ್‌ನಲ್ಲಿ ಪರಸ್ಪರ ಹೋರಾಟ ನಡೆಸುವ ಮೂಲಕವೇ ಕಳೆಯಲಾಗದು‘ ಎಂದೂ ಪೀಠ ಅಭಿಪ್ರಾಯಪಟ್ಟಿತು.

ADVERTISEMENT

ತ್ರಿಪುರಾ ಹೈಕೋರ್ಟ್‌ ಈ ಹಿಂದೆ ದಂಪತಿಗೆ ವಿಚ್ಛೇದನ ನೀಡಿ ಆದೇಶಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಪತ್ನಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು. ಈಗ, ‘ಪರಸ್ಪರ ಚರ್ಚಿಸಿ ಜೀವನಾಂಶ ಕುರಿತು ತೀರ್ಮಾನಕ್ಕೆ ಬನ್ನಿ’ ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್‌ ತಿಂಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದೆ.

ಜೀವನಾಂಶ ಕುರಿತ ವಿಷಯವು ಇತ್ಯರ್ಥವಾಗದ ಕಾರಣ ವಿಚ್ಛೇದನಕ್ಕೆ ಆದೇಶ ನೀಡಿದ ಹೈಕೋರ್ಟ್‌ನ ಕ್ರಮವು ಸರಿಯಾದುದಲ್ಲ ಎಂದು ಪತ್ನಿಯ ಪರವಾಗಿ ಹಾಜರಿದ್ದ ವಕೀಲರು ಪ್ರತಿಪಾದಿಸಿದರು.

ಪತಿಯ ಪರವಾಗಿ ಹಾಜರಿದ್ದ ವಕೀಲ ದುಶ್ಯಂತ್ ಪರಾಶರ್, ‘1995ರಲ್ಲಿ ಮದುವೆಯಾಗಿದ್ದು, ವ್ಯಕ್ತಿಯ ಬದುಕೇ ಹಾಳಾಗಿದೆ. ಕಿರುಕುಳ ಮತ್ತು ಸರಿಪಡಿಸಲಾಗದು ಎಂಬ ಆಧಾರದಲ್ಲಿ ಹೈಕೋರ್ಟ್‌ ವಿಚ್ಛೇದನ ನೀಡಿತ್ತು. ಕಕ್ಷಿದಾರರಿಗೆ ಪತ್ನಿ ಜೊತೆ ಜೀವಿಸಲು ಇಷ್ಟವಿಲ್ಲ. ಜೀವನಾಂಶ ಕೊಡಲು ಸಿದ್ಧರಿದ್ದಾರೆ‘ ಎಂದು ತಿಳಿಸಿದರು.

ಸಂವಿಧಾನದ 142 ವಿಧಿ ಅನ್ವಯ ಇರುವ ಅಧಿಕಾರವವನ್ನು ಬಳಸಿ ವಿಚ್ಛೇದನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

‘ಪತ್ನಿ ಸುಶಿಕ್ಷಿತ ಕುಟುಂಬಕ್ಕೆ ಸೇರಿದವರು. ಹೆಚ್ಚು ಓದಿಕೊಂಡಿದ್ದಾರೆ. ಆಕೆಯ ತಂದೆ ಸೇವಾಹಿರಿತನ ಆಧಾರದಲ್ಲಿ ಐಎಎಸ್‌ಗೆ ಬಡ್ತಿ ಪಡೆದಿದ್ದ ಅಧಿಕಾರಿ. ವಯಸ್ಸಾದ ತನ್ನ ತಾಯಿ, ನಿರುದ್ಯೋಗಿಯಾಗಿದ್ದ ತಮ್ಮನನ್ನು ಬಿಟ್ಟು ಮನೆ ಅಳಿಯನಾಗಿರು ಎಂದು ಪಟ್ಟುಹಿಡಿದಿದ್ದರು. ಅವರ ಮನವೊಲಿಸುವ ಯತ್ನ ಫಲಕೊಡಲಿಲ್ಲ‘ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.