ADVERTISEMENT

ಯೋಗಿ ಸರ್ಕಾರದ ವಾರ್ಷಿಕ ಜಾಹೀರಾತು ವೆಚ್ಚ 2,000 ಕೋಟಿ: ಶಾಗೆ ಎಎಪಿ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಡಿಸೆಂಬರ್ 2021, 6:35 IST
Last Updated 26 ಡಿಸೆಂಬರ್ 2021, 6:35 IST
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್   

ನವದೆಹಲಿ: ದೆಹಲಿಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜಾಹೀರಾತುಗಳಿಗಾಗಿ ಅನವಶ್ಯಕವಾಗಿ ವೆಚ್ಚ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಆಮ್‌ ಆದ್ಮಿ ಪಕ್ಷವು (ಎಎಪಿ) ತಿರುಗೇಟು ನೀಡಿದೆ.

ದೆಹಲಿ ಸರ್ಕಾರವು ಜಾಹೀರಾತು ವೆಚ್ಚವಾಗಿವಾರ್ಷಿಕ ₹ 70 ಕೋಟಿ ಖರ್ಚು ಮಾಡುತ್ತದೆ. ಆದರೆ, ಉತ್ತರ ಪ್ರದೇಶದಲ್ಲಿರುವಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರವು ₹2,000 ಕೋಟಿ ವ್ಯಯಿಸುತ್ತದೆ ಎಂದು ಎಎಪಿ ತಿಳಿಸಿದೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಎಎಪಿ, 'ಬಿಜೆಪಿ ನೇತೃತ್ವದ ದೆಹಲಿ ನಗರಪಾಲಿಕೆಯು ವಿಶ್ವದಲ್ಲಿಯೇ ಅತ್ಯಂತ ಭ್ರಷ್ಟ ಪಾಲಿಕೆಯಾಗಿದೆ. ಈ ಪಾಲಿಕೆಯ ಎಲ್ಲ ಹಣವೂ ಬಿಜೆಪಿ ನಾಯಕರ ಜೇಬು ಸೇರುತ್ತಿದೆ. ಜಾಹೀರಾತುಗಳಿಗಾಗಿ ಹಣ ವ್ಯಯಿಸುವುದಾದರೆ, ದೆಹಲಿಯಾದ್ಯಂತ ಬಿಜೆಪಿ ನಾಯಕರ ಜಾಹೀರಾತುಗಳೇ ತುಂಬಿರುತ್ತವೆ' ಎಂದು ಆರೋಪಿಸಿದೆ.

ADVERTISEMENT

'ದೆಹಲಿಯ ಪತ್ರಿಕೆಗಳಲ್ಲಿ ಯೋಗಿ ಜೀ ಮತ್ತು ಮೋದಿ ಜೀ ಅವರ ಜಾಹೀರಾತುಗಳುಪ್ರತಿದಿನ ಇರುತ್ತವೆ. ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಸರ್ಕಾರದ 108 ಜಾಹೀರಾತು ಫಲಕಗಳಿವೆ ಅಷ್ಟೇ. ಆದರೆ,ಯೋಗಿ ಜೀ ಮತ್ತು ಮೋದಿ ಜೀ ಅವರ 850 ಜಾಹೀರಾತು ಫಲಕಗಳು ದೆಹಲಿಯಲ್ಲಿವೆ. ಯೋಗಿ ಜೀ ಉತ್ತರ ಪ್ರದೇಶದ ಮುಖ್ಯಮಂತ್ರಿ. ಆದಾಗ್ಯೂ, ಅವರು ದೆಹಲಿಯಲ್ಲಿ ಜಾಹೀರಾತು ನೀಡುವುದೇಕೆ?' ಎಂದು ಪ್ರಶ್ನಿಸಿದೆ.

ಮುಂದುವರಿದು, ಜಾಹೀರಾತಿನ ವಿಚಾರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇನೂ ಹಿಂದೆ ಬಿದ್ದಿಲ್ಲ ಎಂದು ಕಿಡಿಕಾರಿರುವ ಎಎಪಿ, 'ಸಣ್ಣ-ಪುಟ್ಟ ಕೆಲಸಗಳನ್ನೂ ಅಪಾರ ಪ್ರಚಾರದೊಂದಿಗೆ ಮಾಡುತ್ತದೆ' ಎಂದು ಟೀಕಿಸಿದೆ.

ದೆಹಲಿ ಪಾಲಿಕೆಗೆ ಬಾಕಿ ಪಾವತಿಸುವುದರ ಬದಲಾಗಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರು ಜಾಹೀರಾತುಗಳಿಗಾಗಿ ದುಂದು ವೆಚ್ಚ ಮಾಡುತ್ತಿದ್ದಾರೆ ಎಂದು ಅಮಿತ್ ಶಾ ಶನಿವಾರ ಆರೋಪಿಸಿದ್ದರು.

'ಜಾಹೀರಾತಿಗಾಗಿ ಕಡಿಮೆ ಖರ್ಚು ಮಾಡಿ, ಪಾಲಿಕೆಗೆ ನೀಡಬೇಕಿರುವ ₹ 13,000 ಕೋಟಿ ಬಾಕಿಯನ್ನು ಬಿಡುಗಡೆ ಮಾಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅವರಿಗೆ ಹೇಳಲು ಇಚ್ಛಿಸುತ್ತೇನೆ. ನಾವು ಏನು ಹೇಳುತ್ತೇವೆಯೇ ಅದನ್ನು ಮಾಡುವುದು ನಮ್ಮ ಸರ್ಕಾರದ ಸಂಸ್ಕಾರ' ಎಂದು ಹೇಳಿದ್ದರು.

ಇದರ ಬೆನ್ನಲ್ಲೇ ಎಎಪಿ ಹೇಳಿಕೆ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.