ನವದೆಹಲಿ: ಇಲ್ಲಿನ ಮದ್ರಾಸಿ ಕೊಳಗೇರಿಯ ತೆರವು ಸ್ಥಳಕ್ಕೆ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಮತ್ತು ದೆಹಲಿ ಎಎಪಿ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್ ಭಾನುವಾರ ಭೇಟಿ ನೀಡಿ ಸಂಕಷ್ಟಕ್ಕೆ ಸಿಲುಕಿರುವ ನಿವಾಸಿಗಳ ಜೊತೆ ಚರ್ಚಿಸಿದರು. ಇದೇ ವೇಳೆ ದೆಹಲಿಯ ಬಿಜೆಪಿ ಸರ್ಕಾರದ ತೆರವು ಕಾರ್ಯಾಚರಣೆ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಅವರು ‘ಎಲ್ಲಿ ಗುಡಿಸಲಿದೆಯೋ ಅಲ್ಲೇ ಮನೆ’ ಎಂದು ಭರವಸೆ ನೀಡಿದ್ದರು. ಆದರೆ, ತಾನೂ ಕೂಡಾ ಇತರೆ ಹಲವರಂತೆ ಪೊಳ್ಳು ಎಂಬುದನ್ನು ಸಾಬೀತು ಮಾಡಿದ್ದಾರೆ’ ಎಂದು ಎಎಪಿ ನಾಯಕರು ಟೀಕಿಸಿದರು.
ನಿಜಾಮುದ್ದೀನ್ ರೈಲು ನಿಲ್ದಾಣದ ಸಮೀಪದ ಬಾರಾಪುಲ್ಲಾಹ್ ರಾಜಕಾಲುವೆ ಪಕ್ಕ ಮದ್ರಾಸಿ ಶಿಬಿರದಲ್ಲಿ ಸುಮಾರು 60 ವರ್ಷಗಳಿಂದ ನೆಲಸಿದ್ದ 370 ಕುಟುಂಬಗಳನ್ನು ಕಳೆದ ತಿಂಗಳು ನೋಟಿಸ್ ನೀಡಿ ಅಧಿಕಾರಿಗಳು ಖಾಲಿ ಮಾಡಿಸಿದ್ದರು. ಇದೀಗ 189 ಕುಟುಂಬಗಳು ಮಾತ್ರ ನರೇಲಾದ ಸರ್ಕಾರಿ ಸಮುಚ್ಚಯದಲ್ಲಿ ಪುನರ್‌ವಸತಿಗೆ ಅರ್ಹರು ಎಂದು ಆಡಳಿತ ಹೇಳುತ್ತಿದೆ.
‘ಮನೆ ಕಟ್ಟಿಕೊಡುವುದಾಗಿ ಹೇಳಿದ್ದ ಬಿಜೆಪಿ ಈಗ ಗುಡಿಸಲುಗಳ ಮೇಲೆ ಬುಲ್ಡೋಜರ್ ಹರಿಸುತ್ತಿದೆ. ಕೊಳಚೆ ಪ್ರದೇಶದ ನಿವಾಸಿಗಳ ಹಕ್ಕು ರಕ್ಷಿಸಲು ಎಎಪಿ ಸಂಸತ್ತಿನವರೆಗೂ ಹೋರಾಟ ಮಾಡುತ್ತದೆ’ ಎಂದು ಸೌರಭ್ ಭಾರದ್ವಾಜ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘50 ವರ್ಷದ ಹಿಂದೆ ತಮಿಳುನಾಡಿನಿಂದ ಬಂದು ಈ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಬಿಜೆಪಿ ಸರ್ಕಾರ ಅತ್ಯಂತ ನಿಷ್ಕರುಣಿಯಂತೆ ನಡೆದುಕೊಳ್ಳುತ್ತಿದೆ’ ಎಂದು ಸಂಜಯ್ ಸಿಂಗ್ ಟೀಕಿಸಿದ್ದಾರೆ.
ನ್ಯಾಯಾಲಯಗಳು ಒತ್ತುವರಿ ತೆರವು ಮಾಡಲು ಆದೇಶ ನೀಡಿವೆ. ಅಧಿಕಾರಿಗಳಾಗಲಿ ಸರ್ಕಾರವಾಗಲಿ ಏನೂ ಮಾಡಲಾಗದು. ಸ್ಥಳಾಂತರಿಸಿದ ನಿವಾಸಿಗಳಿಗೆ ಸೂಕ್ತ ವಸತಿ ಕಲ್ಪಿಸಲಾಗುವುದುರೇಖಾ ಗುಪ್ತ, ದೆಹಲಿ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.