ಸ್ವೀಕರ್ ವಿಜೇಂದರ್ ಗುಪ್ತಾ
ನವದೆಹಲಿ: ದೆಹಲಿ ವಿಧಾನಸಭೆ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಡಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಆತಿಶಿ ಸೇರಿದಂತೆ ಎಎಪಿ ಶಾಸಕರನ್ನು ಮಾರ್ಷಲ್‌ಗಳ ಸಹಾಯದಿಂದ ಶುಕ್ರವಾರ ಸದನದಿಂದ ಹೊರಗೆ ಕಳುಹಿಸಲಾಯಿತು.
ಚುಣಾವಣಾ ಪ್ರಣಾಳಿಕೆಯಲ್ಲಿ ಮಹಿಳಾ ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ ₹2,500 ನೀಡುವುದಾಗಿ ಘೋಷಿಸಿದ್ದ ಯೋಜನೆಯು ಯಾಕೆ ಈವರೆಗೂ ಜಾರಿಯಾಗಿಲ್ಲ. ಈ ಬಗ್ಗೆ ಸ್ಪಷ್ಟೀಕರಿಸಿ ಎಂದು ಎಎಪಿ ಪ್ರಶ್ನೋತ್ತರ ಅವಧಿಯಲ್ಲಿ ಧ್ವನಿ ಎತ್ತಿತ್ತು. ಈ ವೇಳೆ ಗದ್ದಲ ಉಂಟಾಯಿತು.
ಸದನದಲ್ಲಿ ಗದ್ದಲ ಹೆಚ್ಚಾದ್ದರಿಂದ ಸಭಾಪತಿ ವಿಜೇಂದರ್ ಗುಪ್ತಾ ಅವರು ಮಾರ್ಷಲ್‌ಗಳಿಗೆ ಶಾಸಕರನ್ನು ಹೊರಕ್ಕೆ ಕಳುಹಿಸಲು ಸೂಚಿಸಿದರು.
ಮಹಿಳಾ ಸಮೃದ್ಧಿ ಯೋಜನೆಯನ್ನು ಕಾರ್ಯಗತಗೊಳಿಸಲು ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಅಧಿಸೂಚನೆ ಮತ್ತು ಅರ್ಹತಾ ಮಾರ್ಗಸೂಚಿಗಳನ್ನು ರೂಪಿಸಿದ ನಂತರ ಶೀಘ್ರದಲ್ಲೇ ಯೋಜನೆಯ ಹಣವನ್ನು ಒದಗಿಸಲಾಗುವುದು ಎಂದು ಸಚಿವ ಪರ್ವೇಶ್ ವರ್ಮಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅತಿಶಿ, ಮುಖೇಶ್ ಅಹ್ಲಾವತ್, ಜರ್ನೈಲ್ ಸಿಂಗ್, ವಿಶೇಷ್ ರವಿ ಮತ್ತು ಪ್ರೇಮ್ ಚೌಹಾಣ್ ಸೇರಿದಂತೆ ಎಎಪಿ ಶಾಸಕರನ್ನು ಮಾರ್ಷಲ್‌ಗಳು ಹೊರಕ್ಕೆ ಕಳುಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.