ADVERTISEMENT

ದೆಹಲಿ | ಕಪಿಲ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ: AAP ಶಾಸಕರ ಅಮಾನತು

ಪಿಟಿಐ
Published 2 ಏಪ್ರಿಲ್ 2025, 11:30 IST
Last Updated 2 ಏಪ್ರಿಲ್ 2025, 11:30 IST
<div class="paragraphs"><p>ಸಚಿವ ಕಪಿಲ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿ ಎಎಪಿ ನಾಯಕರು ಪ್ರತಿಭಟನೆ ನಡೆಸಿದರು</p></div>

ಸಚಿವ ಕಪಿಲ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿ ಎಎಪಿ ನಾಯಕರು ಪ್ರತಿಭಟನೆ ನಡೆಸಿದರು

   

–ಪಿಟಿಐ ಚಿತ್ರ

ನವದೆಹಲಿ: ದೆಹಲಿಯ ಕಾನೂನು ಸಚಿವ ಕಪಿಲ್ ಮಿಶ್ರಾ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಎಎಪಿ ಶಾಸಕರನ್ನು ಸ್ಪೀಕರ್ ವಿಜೇಂದರ್ ಗುಪ್ತಾ ಅಮಾನತುಗೊಳಿಸಿದ್ದಾರೆ.

ADVERTISEMENT

ಎಎಪಿ ಶಾಸಕರು ಕಪಿಲ್ ಮಿಶ್ರಾ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ನುಗ್ಗಲು ಯತ್ನಿಸಿದ್ದರು. ಈ ವೇಳೆ ಸ್ಪೀಕರ್ ವಿಜೇಂದರ್ ಗುಪ್ತಾ ಅವರು ಕನಿಷ್ಠ ಏಳು ಮಂದಿ ಎಎಪಿ ಶಾಸಕರನ್ನು ಅಮಾನತುಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಕುಲದೀಪ್ ಕುಮಾರ್, ಸಂಜೀವ್ ಝಾ, ಮುಖೇಶ್ ಅಹ್ಲಾವತ್, ಸುರೇಂದ್ರ ಕುಮಾರ್, ಜರ್ನೈಲ್ ಸಿಂಗ್, ಆಲೆ ಮೊಹಮ್ಮದ್ ಮತ್ತು ಅನಿಲ್ ಝಾ ಅಮಾನತಾಗಿರುವ ಶಾಸಕರು.

ಅಮಾನತುಗೊಂಡ ಶಾಸಕರು ಸದನದ ಆವರಣದಲ್ಲಿಯೇ ಇದ್ದಾರೆಯೇ ಮತ್ತು ಅಮಾನತು ಆದೇಶದ ಹೊರತಾಗಿಯೂ ಪ್ರತಿಭಟನೆ ಮುಂದುವರಿಸುತ್ತಿದ್ದಾರೆಯೇ ಎಂದು ಪರಿಶೀಲಿಸುವಂತೆ ಸ್ಪೀಕರ್ ಗುಪ್ತಾ ಅವರು ವಿಧಾನಸಭಾ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕಿ ಆತಿಶಿ ಮಾತನಾಡಿ, ‘2020ರ ದೆಹಲಿ ಗಲಭೆಯ ಎಲ್ಲಾ ಆರೋಪಿಗಳು ಜೈಲಿನಲ್ಲಿದ್ದಾರೆ. ಕಪಿಲ್ ಮಿಶ್ರಾ ಏಕೆ ಜೈಲಿನಲ್ಲಿಲ್ಲ? ನಾವು ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದೇವೆ. ಆದರೆ, ಮಿಶ್ರಾ ಅವರನ್ನು ಬಿಜೆಪಿ ರಕ್ಷಣೆ ಮಾಡುತ್ತಿದೆ’ ಎಂದು ಕಿಡಿಕಾರಿದ್ದಾರೆ.

ದೆಹಲಿಯಲ್ಲಿ 2020ರಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕಪಿಲ್‌ ಮಿಶ್ರಾ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಎಂದು ದೆಹಲಿ ನ್ಯಾಯಾಲಯವು ಮಂಗಳವಾರ ಆದೇಶಿಸಿತ್ತು.

‘ಗಲಭೆ ಸಂಭವಿಸಿದಾಗ ಮಿಶ್ರಾ ಅವರು ಅಲ್ಲಿ ಇದ್ದಿದ್ದು ಸ್ಪಷ್ಟವಾಗಿದೆ. ಮೇಲ್ನೋಟಕ್ಕೆ ಗುರುತಿಸಬಹುದಾದ ಅಪರಾಧ ಗೋಚರಿಸುತ್ತಿದೆ. ಆದ್ದರಿಂದ ತನಿಖೆಯ ಅಗತ್ಯವಿದೆ’ ಎಂದು ಹೆಚ್ಚುವರಿ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ವೈಭವ್‌ ಚೌರಾಸಿಯಾ ಹೇಳಿದ್ದರು.

ಕಪಿಲ್‌ ಮಿಶ್ರಾ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿ ಯಮುನಾ ವಿಹಾರ್‌ನ ನಿವಾಸಿ ಮೊಹಮದ್‌ ಇಲ್ಯಾಸ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ. ಗಲಭೆಯಲ್ಲಿ ಸಚಿವರ ಯಾವುದೇ ಪಾತ್ರವಿಲ್ಲ ಎಂದು ದೆಹಲಿ ಪೊಲೀಸರು ಈ ಅರ್ಜಿಯನ್ನು ವಿರೋಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.