ನವದೆಹಲಿ: ಎಎಪಿಗೆ ಕಚೇರಿಗೆ ಸ್ಥಳ ಒದಗಿಸುವ ಕುರಿತು 6 ವಾರದೊಳಗಾಗಿ ನಿರ್ಧಾರ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
‘ಯಾವುದೇ ರಾಷ್ಟ್ರೀಯ ಪಕ್ಷವು ಸ್ವಂತ ಕಟ್ಟಡ ನಿರ್ಮಿಸಿಕೊಳ್ಳುವವರೆಗೆ ನಿಗದಿತ ಶುಲ್ಕ ಪಾವತಿಯೊಂದಿಗೆ ಬೇರೆ ಕಟ್ಟಡದಲ್ಲಿ ಕಚೇರಿ ನಿರ್ಮಿಸುವ ಹಕ್ಕನ್ನು ಹೊಂದಿರುತ್ತದೆ. ಈ ಹಕ್ಕೂ ಎಎಪಿಗೂ ಇದೆ’ ಎಂದು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ತಿಳಿಸಿದ್ದಾರೆ.
‘ಒತ್ತಡ ಮತ್ತು ಜಾಗದ ಕೊರತೆ ಇದೆ ಎನ್ನುವುದು ಮನವಿ ತಿರಸ್ಕರಿಸಲು ಸೂಕ್ತವಾದ ಕಾರಣಗಳಲ್ಲ. ಅರ್ಜಿದಾರರರಿಗೆ ಜಿಆರ್‌ಪಿಎನಲ್ಲಿ ಸ್ಥಳ ಒದಗಿಸದಿರಲು ಒತ್ತಡವಿದೆ ಎಂಬ ಕಾರಣ ನೀಡಬೇಡಿ’ ಎಂದು ನ್ಯಾಯಾಲಯ ತಿಳಿಸಿದೆ.
‘ಬುಧವಾರದಿಂದ 6 ವಾರದೊಳಗಾಗಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಮತ್ತು ಇತರ ರಾಷ್ಟ್ರೀಯ ಪಕ್ಷಗಳಿಗೆ ಜಿಪಿಆರ್‌ಎನಲ್ಲಿ ಸ್ಥಳ ನೀಡಿರುವಂತೆ ಎಎಪಿಗೆ ಯಾಕೆ ನೀಡಲಾಗುತ್ತಿಲ್ಲ ಎಂಬ ಬಗ್ಗೆ ವಿವರವಾದ ಮಾಹಿತಿ ನೀಡಬೇಕು. ಒಂದು ವೇಳೆ ಅರ್ಜಿ ತಿರಸ್ಕೃತವಾದರೆ, ಎಎಪಿಯು ಕಾನೂನಿನಡಿ ಹೋರಾಟ ನಡೆಸಲಿ’ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ರಾಷ್ಟ್ರೀಯ ಪಕ್ಷದ ಮಾನ್ಯತೆ ದೊರೆತಿರುವುದರಿಂದ ದೆಹಲಿಯಲ್ಲಿ ಪ್ರಧಾನ ಕಚೇರಿ ತೆರಯಲು ಸ್ಥಳಾವಕಾಶ ನೀಡಬೇಕೆಂದು ಕೋರಿ ಎಎಪಿಯು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳದ ಹಿನ್ನೆಲೆ ಎಎಪಿ ಕೋರ್ಟ್ ಮೊರೆ ಹೋಗಿದೆ.
‘ಪಸ್ತುತ ದೆಹಲಿಯ ದೀನ್ ದಯಾಳ್ ರಸ್ತೆ ಬಳಿ ಎಎಪಿ ಕಚೇರಿ ಇರುವ ಸ್ಥಳವು ಸರ್ಕಾರಕ್ಕೆ ಸೇರಿದ್ದು, ಅದನ್ನು ಪಕ್ಷಕ್ಕಾಗಿ ಬಳಕೆ ಮಾಡುವಂತಿಲ್ಲ. ದಾಖಲೆಗಳ ಪ್ರಕಾರ ಆ ಜಾಗ ಭೂ ಅಭಿವೃದ್ಧಿ ಕಚೇರಿಗೆ ವರ್ಗಾವಣೆಯಾಗಬೇಕು’ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.