ಸಂಜಯ್ ಸಿಂಗ್
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಆರೋಪ–ಪ್ರತ್ಯಾರೋಪಗಳು, ಪ್ರತಿಭಟನೆಗಳ ಅಬ್ಬರ ಜೋರಾಗಿದೆ.
ನಮ್ಮ ಪಕ್ಷದ ಶಾಸಕ ರುತುರಾಜ್ ಝಾ ಅವರ ಬಗ್ಗೆ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಚರ್ಚೆ ವೇಳೆ ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ಆರೋಪಿಸಿರುವ ಎಎಪಿ ಸಂಸದ ಸಂಜಯ್ ಸಿಂಗ್, ಈ ಸಂಬಂಧ ನಾಳೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಮಂಗಳವಾರ ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಚರ್ಚೆ ಸಂದರ್ಭದಲ್ಲಿ ಪೂರ್ವಾಂಚಲ ಮೂಲದ ಝಾ ವಿರುದ್ಧ ಪೂನಾವಾಲಾ ಅಸಭ್ಯ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.
‘ಮೈಥಿಲ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಝಾ ಅವರ ಬಗ್ಗೆ ಬಿಜೆಪಿ ವಕ್ತಾರರು ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ. ಈ ಬಗ್ಗೆ ಬಿಜೆಪಿ ಸಂಸದ ಮನೋಜ್ ತಿವಾರಿಯನ್ನು ಕೇಳಲು ಇಚ್ಛಿಸುತ್ತೇನೆ. ಮೈಥಿಲ್ ಬ್ರಾಹ್ಮಣ ಸಮುದಾಯದ ಶಾಸಕನನ್ನು ನಿಂದಿಸಲಾಗಿದೆ. ನೀವು ಎಲ್ಲಿದ್ದೀರಿ? ಏಕೆ ಮಾತನಾಡುತ್ತಿಲ್ಲ?’ಎಂದು ಸಂಜಯ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
‘ಈ ಸಂಬಂಧ ದೆಹಲಿಯಾದ್ಯಂತ ಗುರುವಾರ ನಾವು ಪ್ರತಿಭಟನೆ ನಡೆಸುತ್ತೇವೆ. ಪೂರ್ವಾಂಚಲಿಗಳಿರುವ ಪ್ರದೇಶಗಳಲ್ಲಿ ಇಂದಿನಿಂದ ನಮ್ಮ ಸಭೆಗಳು ಆರಂಭವಾಗಲಿವೆ. ಈ ಅಪಮಾನದ ಬಗ್ಗೆ ನಾವು ಅವರಿಗೆ ತಿಳಿಸುತ್ತೇವೆ. ಈ ಸಂಬಂಧ ಬಿಜೆಪಿ ವಿರುದ್ಧ ಮತ ಚಲಾಯಿಸುವ ಮೂಲಕ ಸೇಡು ತೀರಿಸಿಕೊಳ್ಳುವಂತೆ ನಾನು ಅವರಲ್ಲಿ ಮನವಿ ಮಾಡುವೆ’ಎಂದಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದೆ. ಫೆಬ್ರುವವರಿ 8ರಂದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.