ADVERTISEMENT

ಸಿಬಿಐ ದಾಳಿ ಬಳಿಕ ಗುಜರಾತ್‌ನಲ್ಲಿ ಎಎಪಿ ಮತ ಪ್ರಮಾಣ ಶೇ 4 ಹೆಚ್ಚಳ: ಕೇಜ್ರಿವಾಲ್

'ಸಿಸೋಡಿಯಾರನ್ನು ಬಂಧಿಸಿದರೆ ಎಎಪಿ ಮತ ಶೇ 4 ಇದ್ದಿದ್ದು ಶೇ 6 ಆಗಲಿದೆ'

ಪಿಟಿಐ
Published 1 ಸೆಪ್ಟೆಂಬರ್ 2022, 9:57 IST
Last Updated 1 ಸೆಪ್ಟೆಂಬರ್ 2022, 9:57 IST
ದೆಹಲಿ ವಿಧಾನಸಭೆಯಲ್ಲಿ ಸಿಎಂ ಕೇಜ್ರಿವಾಲ್ ಮತ್ತು ಡಿಸಿಎಂ ಮನೀಷ್ ಸಿಸೋಡಿಯಾ: ಪಿಟಿಐ ಚಿತ್ರ
ದೆಹಲಿ ವಿಧಾನಸಭೆಯಲ್ಲಿ ಸಿಎಂ ಕೇಜ್ರಿವಾಲ್ ಮತ್ತು ಡಿಸಿಎಂ ಮನೀಷ್ ಸಿಸೋಡಿಯಾ: ಪಿಟಿಐ ಚಿತ್ರ   

ನವದೆಹಲಿ: ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ಬಳಿಕ ಗುಜಾರಾತ್‌ನಲ್ಲಿ ಎಎಪಿ ಮತ ಪ್ರಮಾಣ ಶೇಕಡ 4ರಷ್ಟು ಹೆಚ್ಚಳವಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಒಂದು ವೇಳೆ, ಸಿಸೋಡಿಯಾ ಅವರನ್ನು ಬಂಧಿಸಿದರೆ ಈ ಮತ ಪ್ರಮಾಣ ಶೇಕಡ 6ಕ್ಕೆ ಏರಲಿದೆ ಎಂದು ದೆಹಲಿ ವಿಧಾನಸಭೆಯ ವಿಶ್ವಾಸಮತ ಯಾಚನೆ ಸಂದರ್ಭದ ಚರ್ಚೆ ವೇಳೆ ಎಎಪಿ ಪಕ್ಷದ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ತಿಳಿಸಿದರು.

‘ಸಿಸೋಡಿಯಾ ಅವರ ಮೇಲೆ ಸಿಬಿಐ ದಾಳಿ ನಡೆಸಿದೆ. ಅವರ ಹಳ್ಳಿಗೂ ತೆರಳಿತ್ತು. ಬ್ಯಾಂಕ್ ಲಾಕರ್ ಶೋಧ ನಡೆಸಿದೆ. ಸಿಸೋಡಿಯಾ ಅವರ ಬಳಿ ಅಕ್ರಮಕ್ಕೆ ಸಂಬಂಧಿಸಿದ್ದು ಏನೂ ದೊರೆತಿಲ್ಲ ಎಂದು ಸಿಬಿಐ ಹೇಳಿದ್ದರೂ ಸಹ ಅವರ ಬಂಧನಕ್ಕೆ ಒತ್ತಡವಿದೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ADVERTISEMENT

ಈ ಮೂಲಕ ಪ್ರಧಾನಿಯವರೇ ಸಿಸೋಡಿಯಾಗೆ ಪ್ರಾಮಾಣಿಕತೆ ಪ್ರಮಾಣಪತ್ರ ನೀಡಿದಂತಾಗಿದೆ ಎಂದು ಅವರು ಹೇಳಿದ್ದಾರೆ.

ಕೇಸರಿ ಪಕ್ಷವು ನಮ್ಮ ಪಕ್ಷದ ಶಾಸಕರನ್ನು ಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಆದರೆ, ಯಾವೊಬ್ಬ ಶಾಸಕನೂ ಸಹ ಬಿಜೆಪಿಯ ಆಫರ್ ಅನ್ನು ಒಪ್ಪಿಕೊಂಡಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಸಂಪೂರ್ಣ ಭ್ರಷ್ಟ ಪಕ್ಷಕ್ಕೆ ವಿದ್ಯಾವಂತರ ಕೊರತೆಯಿದೆ. ಆದರೆ, 'ಹಾರ್ಡ್‌ಕೋರ್ ಪ್ರಾಮಾಣಿಕ' ಪಕ್ಷವು ಉತ್ತಮ ಶಿಕ್ಷಣ, ನಿಜವಾದ ಐಐಟಿ ಪದವಿ ಹೊಂದಿರುವವರನ್ನು ಹೊಂದಿದೆ ಎಂದು ಅವರು ಬಿಜೆಪಿಯನ್ನು ಕುಟುಕಿದರು.

ಶಾಸಕರನ್ನು ಖರೀದಿಸಲು ₹ 20-50 ಕೋಟಿ ಖರ್ಚು ಮಾಡುತ್ತಿದ್ದಾರೆ. ನಾನು ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸುವ ಮೂಲಕ ಏನಾದರೂ ತಪ್ಪು ಮಾಡುತ್ತಿದ್ದೀನಾ? ಎಂದು ಅವರು ಪ್ರಶ್ನಿಸಿದರು.

ದೆಹಲಿಯಲ್ಲಿ ಬಿಜೆಪಿಯ ‘ಆಪರೇಷನ್ ಕಮಲ’ ವಿಫಲವಾಗಿದೆ ಎಂದು ತೋರಿಸಲು ಎಎಪಿ ಸರ್ಕಾರ ಸೋಮವಾರ ವಿಶ್ವಾಸಮತ ಯಾಚನೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.