ADVERTISEMENT

ದೆಹಲಿ ಸರ್ಕಾರದೊಂದಿಗೆ ಲೆ.ಗವರ್ನರ್ ಹೊಂದಾಣಿಕೆ ಅಗತ್ಯ: ಸುಪ್ರೀಂ ಕೋರ್ಟ್

ದೆಹಲಿಗೆ ರಾಜ್ಯದ ಸ್ಥಾನವಿಲ್ಲ

ಏಜೆನ್ಸೀಸ್
Published 4 ಜುಲೈ 2018, 6:39 IST
Last Updated 4 ಜುಲೈ 2018, 6:39 IST
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಲೆ.ಗವರ್ನರ್‌ ಅನಿಲ್‌ ಬೈಜಲ್‌ 
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಲೆ.ಗವರ್ನರ್‌ ಅನಿಲ್‌ ಬೈಜಲ್‌    

ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರದ ಆಡಳಿತ ಹಾಗೂ ಆಡಳಿತ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವಿನ ಜಟಾಪಟಿಗೆ ಸುಪ್ರೀಂ ಕೋರ್ಟ್‌ ಬುಧವಾರ ತೆರೆ ಎಳೆದಿದೆ. ’ದೆಹಲಿಗೆ ರಾಜ್ಯದ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದೊಂದಿಗೆ ಲೆಫ್ಟಿನೆಂಟ್‌ ಗವರ್ನರ್‌ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು’ ಎಂದು ಹೇಳಿದೆ.

’ಸಂವಿಧಾನವನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧ ಆರೋಗ್ಯಕರವಾಗಿರಬೇಕು.ನಿರಂಕುಶವಾದ ಮತ್ತು ಅರಾಜಕತೆಗೆ ಸಂವಿಧಾನದಲ್ಲಿ ಸ್ಥಳವಿಲ್ಲ. ಲೆಫ್ಟಿನೆಂಟ್‌ ಗವರ್ನರ್‌ ರಾಜ್ಯದೊಂದಿಗೆ ಸೌಹಾರ್ದಯುತವಾಗಿ ಕಾರ್ಯನಿರ್ವಹಿಸಬೇಕು, ಲೆ.ಗವರ್ನರ್‌ ಮತ್ತು ಸಚಿವರ ನಡುವೆ ಹೊಂದಾಣಿಕೆ ಅಗತ್ಯ’ ಎಂದುಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಆದೇಶಿಸಿದೆ.

ಸಂವಿಧಾನಾತ್ಮಕ ಅವಕಾಶವಿರದ ಹೊರತು ಲೆ.ಗವರ್ನರ್‌ ಸ್ವತಂತ್ರ ಆಡಳಿತ ಸಾಧ್ಯವಿಲ್ಲ. ಲೆ.ಗವರ್ನರ್‌ ಸರ್ಕಾರದ ಪ್ರತಿರೋಧಿಯಾಗಿ ವರ್ತಿಸುವಂತಿಲ್ಲ. ರಾಷ್ಟ್ರಪತಿಗಳಿಗೆ ಅವರ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸುವ ಅಗತ್ಯವಿರುವುದಿಲ್ಲ ಹಾಗೂ ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನವಿರುವುದಿಲ್ಲ. ದೆಹಲಿಯ ಚುನಾಯಿತ ಸರ್ಕಾರವನ್ನು ಲೆ.ಗವರ್ನರ್‌ ಗೌರವಿಸಬೇಕು ಹಾಗೂ ಅವರಿಗೆ ಸ್ವತಂತ್ರ ನಿರ್ಣಯದ ಅಧಿಕಾರವಿಲ್ಲ. ಸಚಿವ ಸಂಪುಟದೊಂದಿಗೆ ಸಲಹೆ ಮತ್ತು ಸಹಕಾರ ಅಗತ್ಯ. ನಿರ್ಣಾಯಕ ಸಂದರ್ಭಗಳಲ್ಲಿ ಮಾತ್ರ ಲೆ.ಗವರ್ನರ್‌ ವಿಶೇಷ ಅಧಿಕಾರವನ್ನು ಬಳಸುವ ಅವಕಾಶವಿರುತ್ತದೆ ಎಂದಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಅರವಿಂದ್ ಕೇಜ್ರಿವಾಲ್‌, ‘ದೆಹಲಿಯ ಜನರ ದೊಡ್ಡ ಗೆಲುವು...ಪ್ರಜಾಪ್ರಭುತ್ವದ ವಿಜಯ..’ ಎಂದು ಟ್ವೀಟಿಸಿದ್ದಾರೆ.

ಲೆಫ್ಟಿನೆಂಟ್‌ ಗವರ್ನರ್‌ ದೆಹಲಿಯ ಆಡಳಿತದ ಸೂತ್ರ ಹಿಡಿದಿರುತ್ತಾರೆ ಎಂದು ದೆಹಲಿ ಹೈಕೋರ್ಟ್‌ 2016ರ ಆಗಸ್ಟ್‌ 4ರಂದು ನೀಡಿದ್ದ ತೀರ್ಪು ಪ್ರಶ್ನಿಸಿ ದೆಹಲಿ ಸರ್ಕಾರ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ, 2017ರ ಡಿಸೆಂಬರ್‌ 6ರಂದು ತೀರ್ಪು ಕಾಯ್ದಿರಿಸಿತ್ತು.

ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ, ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಇಂದಿರಾ ಜೈಸಿಂಗ್‌ ಹಾಗೂ ಸಾಲಿಸಿಟರ್‌ ಜನರಲ್‌ ಗೋಪಾಲ್‌ ಸುಬ್ರಮಣಿಯಂ ಸೇರಿ ಅನೇಕ ಹಿರಿಯ ವಕೀಲರುದೆಹಲಿ ಸರ್ಕಾರದ ಪರವಾಗಿ ವಾದ ಮಂಡಿದ್ದರು. ರಾಷ್ಟ್ರ ರಾಜಧಾನಿಯ ಆಡಳಿತ ನಿರ್ವಹಣಾ ಅಧಿಕಾರವನ್ನು ಚುನಾಯಿತ ಸರ್ಕಾರ ಹೊಂದಿರಬೇಕೆಂಬ ವಾದವನ್ನು ಕೇಂದ್ರ ಸರ್ಕಾರ ದೃಢವಾಗಿ ತಿರಸ್ಕರಿಸಿದೆ.

ಮುಖ್ಯಮಂತ್ರಿ ಕಚೇರಿಗೆ ಅಧಿಕಾರಿಗಳ ನೇಮಕಾತಿ ಮಾಡುವಾಗ ಮುಖ್ಯಮಂತ್ರಿ ಸಮ್ಮತಿಯ ಅಗತ್ಯವನ್ನು ವಿವರಿಸಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರಿಗೆ ಸಿಎಂ ಅರವಿಂದ್ ಕೇಜ್ರಿವಾಲ್‌ ಪತ್ರ ಬರೆದಿದ್ದರು. ಚುನಾಯಿತ ಮುಖ್ಯಮಂತ್ರಿಗೆ ಅವರ ಅಧಿಕಾರಿ ವರ್ಗವನ್ನು ‌ಆಯ್ಕೆ ಮಾಡುವ ಅವಕಾಶವಿರುತ್ತದೆ. ಆದರೆ, ದೆಹಲಿಯಲ್ಲಿ ಈ ಎಲ್ಲ ನಿಯಮಗಳು ಸದಾ ಉಲ್ಲಂಘನೆಯಲ್ಲಿವೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಕೇಂದ್ರ ಸರ್ಕಾರ ಮತ್ತು ಲೆ.ಗವರ್ನರ್‌ ಜತೆಗೆ ದೆಹಲಿ ಸರ್ಕಾರದ ಗುದ್ದಾಟ 2015ರಲ್ಲಿ ಎಎಪಿ ಅಧಿಕಾರವಹಿಸಿದಾಗಿನಿಂದಲೂ ಮುಂದುವರಿದಿದೆ. ದೆಹಲಿ ಕೇಂದ್ರಾಡಳಿ ಪ್ರದೇಶವಾಗಿರುವ ಕಾರಣ, ದೆಹಲಿ ಸರ್ಕಾರಕ್ಕೆ ಭೂಮಿ, ಹಿರಿಯ ಅಧಿಕಾರಗಳ ನೇಮಕಾತಿ ಹಾಗೂ ಪೊಲೀಸ್‌ ಪಡೆಗಳ ಮೇಲೆ ನಿಯಂತ್ರಣದ ಅಧಿಕಾರವಿಲ್ಲ. ಲೆ.ಗವರ್ನರ್‌ ಈ ಮೂರರ ಮೇಲೂ ನಿಯಂತ್ರಣ ಹೊಂದಿದ್ದಾರೆ.

** ಇದೊಂದು ಮಹತ್ತರ ತೀರ್ಮಾನವಾಗಿದೆ. ಈಗ ದೆಹಲಿ ಸರ್ಕಾರ ಪ್ರತಿಯೊಂದು ಅನುಮತಿಗಾಗಿ ಲೆ.ಗವರ್ನರ್‌ಗೆ ಕಡತಗಳನ್ನು ರವಾನಿಸುವ ಅಗತ್ಯವಿಲ್ಲ, ಕಾರ್ಯಗಳು ಕುಂಠಿಗೊಳ್ಳುವುದಿಲ್ಲ. ಇದು ಪ್ರಜಾಪ್ರಭುತ್ವದ ಗೆಲುವು. ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು.
– ಮನೀಶ್‌ ಸಿಸೋಡಿಯ, ದೆಹಲಿ ಉಪ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.