ADVERTISEMENT

ಆರೋಗ್ಯ ಸೇತು ಆ್ಯಪ್‌ ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ: ರಾಹುಲ್ ಗಾಂಧಿ‌ ಆತಂಕ

​ಪ್ರಜಾವಾಣಿ ವಾರ್ತೆ
Published 2 ಮೇ 2020, 16:11 IST
Last Updated 2 ಮೇ 2020, 16:11 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ    

ನವದೆಹಲಿ:ಕೊರೊನಾ ವೈರಸ್‌ ಸೋಂಕಿತರ ಮೇಲೆ ನಿಗಾವಹಿಸುವ ಆರೋಗ್ಯ ಸೇತು ಆ್ಯಪ್‌ನ ಸುರಕ್ಷತೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ಶನಿವಾರ (ಮೇ–2) ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ‘ಆರೋಗ್ಯ ಸೇತು ಆ್ಯಪ್‌ ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆಯಾಗಿದೆ. ಇದರ ನಿರ್ವಹಣೆಯನ್ನು ಹೊರಗಿನ ಖಾಸಗಿ ಆಪರೇಟರ್‌ಗಳಿಗೆ ನೀಡಲಾಗಿದೆ. ಆದರೆ, ಇದರ ಮೇಲೆ ಸರ್ಕಾರದ ನಿಯಂತ್ರಣವೇ ಇಲ್ಲ. ಇದರಿಂದ ದತ್ತಾಂಶ ಮತ್ತು ಖಾಸಗಿತನಕ್ಕೆ ಸಂಬಂಧಿಸಿದಂತೆ ಗಂಭೀರ ಆತಂಕವಿದೆ. ತಂತ್ರಜ್ಞಾನ ಯಾವಾಗಲೂ ನಮ್ಮನ್ನು ಸುರಕ್ಷಿತವಾಗಿಡಲು ನೆರವಾಗಬೇಕೆ ವಿನಾ ನಾಗರಿಕರಿಗೆ ಅರಿವಿಲ್ಲದಂತೆ ಅವರ ಮಾಹಿತಿ ಕಬಳಿಸುವ ಭಯ ಹುಟ್ಟಿಸುವಂತಿರಬಾರದು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಕೋವಿಡ್–19 ವಿರುದ್ಧದ ಹೋರಾಟದಲ್ಲಿ ದೇಶವು ತಂತ್ರಜ್ಞಾನದ ನೆರವನ್ನೂ ಪಡೆದುಕೊಂಡಿದೆ. ಸ್ಮಾರ್ಟ್‌ಫೋನ್‌ ಹೊಂದಿರುವ ವ್ಯಕ್ತಿಗಳು ಆರೋಗ್ಯ ಸೇತು ಎನ್ನುವ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಅದು ನೀಡುವ ಸಲಹೆ– ಸೂಚನೆಗಳ ಮೂಲಕ ತಮ್ಮನ್ನು ಸುರಕ್ಷಿತವಾಗಿಸಿಕೊಳ್ಳುವ ಯತ್ನದ ಮೊರೆ ಹೋಗಬಹುದು.

ಇದರ ಬಳಕೆದಾರರು ಆ್ಯಪ್‌ ಮೂಲಕವೇ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿ, ತಮ್ಮ ದೇಹದಲ್ಲಿ ಕಾಣಿಸಿಕೊಂಡಿರುವ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿ, ತಾವು ಕಳೆದ 14 ದಿನಗಳ ಅವಧಿಯಲ್ಲಿ ಎಲ್ಲೆಲ್ಲಿಗೆ ಭೇಟಿ ನೀಡಿದ್ದೆವು ಎಂಬುದನ್ನು ತಿಳಿಸಿ, ತಾವು ಕೊರೊನಾ ವೈರಾಣುವಿಗೆ ತುತ್ತಾಗಿರುವ ಸಾಧ್ಯತೆ ಇದೆಯೇ ಎಂಬುದನ್ನು ಕಂಡುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.