ADVERTISEMENT

ನಾನು ವಿವಾದಿತ ಹೇಳಿಕೆ ನೀಡಲಾರೆ: ಅಭಿಜಿತ್ ಬ್ಯಾನರ್ಜಿ 

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 13:04 IST
Last Updated 22 ಅಕ್ಟೋಬರ್ 2019, 13:04 IST
ಅಭಿಜಿತ್ ಬ್ಯಾನರ್ಜಿ
ಅಭಿಜಿತ್ ಬ್ಯಾನರ್ಜಿ    

ನವದೆಹಲಿ: ನಾನು ವಿವಾದಿತ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ.ಭಾರತದ ಆರ್ಥಿಕತೆ ಬಗ್ಗೆ ನಿಮ್ಮ ಟೀಕೆಗಳೇನು ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ ಬ್ಯಾನರ್ಜಿ ಈ ರೀತಿ ಉತ್ತರಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಮಂಗಳವಾರ ಅಭಿಜಿತ್ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು.

'ಮಾಧ್ಯಮದವರು ನನ್ನ ಬಾಯಿಯಿಂದ ಮೋದಿ ವಿರೋಧಿ ಮಾತುಗಳನ್ನು ಕೇಳಲು ಏನೆಲ್ಲಾ ಮಾಡುತ್ತಾರೆ ನೋಡಿಎನ್ನುತ್ತಾ ಮೋದಿ ತಮಾಷೆ ಮಾಡಿದರು. ಅವರು ಟಿವಿ ನೋಡುತ್ತಾರೆ. ನಿಮ್ಮನ್ನು ಗಮನಿಸುತ್ತಾರೆ. ನೀವು ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂಬುದು ಅವರಿಗೆ ಗೊತ್ತಿದೆ' ಎಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ ಹೇಳಿದ್ದಾರೆ.

ಬ್ಯಾಂಕಿಂಗ್ ವಲಯದಲ್ಲಿನ ಆರ್ಥಿಕ ಹಿಂಜರಿತ ಬಗ್ಗೆ ಮಾತನಾಡಿದ ಬ್ಯಾನರ್ಜಿ, ಇದು ತುಂಬಾ ಗಂಭೀರ ಮತ್ತು ಭಯಾನಕವಾದುದು. ಈ ಬಗ್ಗೆ ನಾವು ಚಿಂತಿಸಬೇಕಾಗಿದೆ. ಇದರ ಸುಧಾರಣೆಗಾಗಿ ನಾವು ಕೆಲವು ಪ್ರಧಾನ ಬದಲಾವಣೆಗಳನ್ನು ಮಾಡಬೇಕಿದೆ ಎಂದಿದ್ದಾರೆ.

ಕೇಂದ್ರ ಜಾಗೃತ ಆಯೋಗದ (ಸಿವಿಸಿ) ಬಗ್ಗೆ ಟೀಕೆ ಮಾಡಿದ ಬ್ಯಾನರ್ಜಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮೇಲೆ ಸರ್ಕಾರದ ಹಕ್ಕನ್ನು ಶೇ. 50ಕ್ಕಿಂತ ಕಡಿಮೆ ಮಾಡಬೇಕು. ಹೀಗೆ ಮಾಡಿದರೆ ಸರ್ಕಾರ ಬ್ಯಾಂಕ್‌ಗಳಲ್ಲಿ ಹಸ್ತಕ್ಷೇಪ ಮಾಡಲಾರದು. ಪರೀಕ್ಷಿಸುವ ಮತ್ತು ಅದನ್ನು ನಿಭಾಯಿಸಿಕೊಂಡು ಹೋಗಬೇಕಾದ ಹೊಣೆ ಇರುವ ಸಿವಿಸಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಕ್ಷಯಿಸಿ ದೀವಾಳಿಯಾಗುವಂತೆ ಮಾಡುತ್ತಿದೆ.

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಕೆಳಗಿದೆ ಎಂಬ ವಿಷಯದ ಬಗ್ಗೆ ಮಾತನಾಡಲು ನಿರಾಕರಿಸಿದ ಬ್ಯಾನರ್ಜಿ ನಾನು ಎಚ್‌ಡಿಐಗೆ ಯಾವುದೇ ರೀತಿಯ ಕೊಡುಗೆ ನೀಡಿಲ್ಲ.ನಾನಿಲ್ಲದೆ ಅದು ಚೆನ್ನಾಗಿಯೇ ನಡೆಯುತ್ತಿದೆ, ನಾನು ಭಾಗಿಯಾಗದೇ ಇರುವ ವಿಷಯದಲ್ಲಿ ನಾನು ಮೂಗುತೂರಿಸಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಭೇಟಿ ಮಾಡಿದ ನಂತರ ಮೋದಿಯವರ ಯೋಚನಾ ರೀತಿ ಬಗ್ಗೆ ಬ್ಯಾನರ್ಜಿ ಹೊಗಳಿದ್ದಾರೆ.ಮೋದಿಯವರು ಸರ್ಕಾರ ಹೇಗೆ ನಡೆಸೇಕು ಎಂಬುದರ ಬಗ್ಗೆ, ಸರ್ಕಾರದ ರೀತಿ ನೀತಿ ಮತ್ತು ಅದರ ಪ್ರಕ್ರಿಯೆ ಬಗ್ಗೆ ಮಾತನಾಡಿದ್ದಾರೆ. ಇಲ್ಲಿನ ಜನರನ್ನು ಯಾವ ರೀತಿ ಅಭಿವೃದ್ಧಿಗೊಳಿಸಬೇಕು ಮತ್ತು ಜನರ ನಿಲುವುಗಳ ಬಗ್ಗೆಯೂ ಅವರಿಗೆ ತಿಳಿದಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.