ADVERTISEMENT

ಗುಜರಾತ್: ಯಾತ್ರಿಕರಿದ್ದ ಬಸ್ ಕಮರಿಗೆ ಉರುಳಿ ಐವರು ಸಾವು, 35 ಮಂದಿಗೆ ಗಾಯ

ಪಿಟಿಐ
Published 2 ಫೆಬ್ರುವರಿ 2025, 9:43 IST
Last Updated 2 ಫೆಬ್ರುವರಿ 2025, 9:43 IST
<div class="paragraphs"><p>ಗುಜರಾತ್‌ನ ದಾಂಗ್‌ ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ಬಸ್‌</p></div>

ಗುಜರಾತ್‌ನ ದಾಂಗ್‌ ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ಬಸ್‌

   

ಪಿಟಿಐ ಚಿತ್ರ

ದಾಂಗ್‌: ಮಧ್ಯ ಪ್ರದೇಶದಿಂದ ಯಾತ್ರಿಕರನ್ನು ಹೊತ್ತು ಸಾಗುತ್ತಿದ್ದ ಬಸ್‌ ಗುಜರಾತ್‌ನ ದಾಂಗ್‌ ಜಿಲ್ಲೆಯಲ್ಲಿ ಇಂದು (ಭಾನುವಾರ) ಮುಂಜಾನೆ ಕಮರಿಗೆ ಉರುಳಿದೆ. ಪರಿಣಾಮವಾಗಿ ಐವರು ಮೃತಪಟ್ಟು 35 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಗಾಯಗೊಂಡವರಲ್ಲಿ 17 ಜನರ ಸ್ಥಿತಿ ಗಂಭೀರವಾಗಿದೆ. ಸಂತ್ರಸ್ತರು, ದೇಶದ ವಿವಿಧ ರಾಜ್ಯಗಳ ಯಾತ್ರಾ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದರು ಎಂದಿದ್ದಾರೆ.

ಸಪುತಾರ ಹಿಲ್‌ ಸ್ಟೇಷನ್‌ ಸಮೀಪ, ಮುಂಜಾನೆ 4.15ರ ಹೊತ್ತಿಗೆ ದುರ್ಘಟನೆ ಸಂಭವಿಸಿದೆ. 48 ಯಾತ್ರಿಕರಿದ್ದ ಬಸ್‌, ಚಾಲಕನ ನಿಯಂತ್ರಣ ಕಳೆದುಕೊಂಡು 35 ಅಡಿ ಆಳದ ಕಮರಿಗೆ ಉರುಳಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಜಿ. ಪಾಟೀಲ್‌ ಮಾಹಿತಿ ನೀಡಿದ್ದಾರೆ.

ಈ ಬಸ್ಸು, ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ತ್ರಿಯಂಬಕೇಶ್ವರದಿಂದ ಗುಜರಾತ್‌ನ ದ್ವಾರಕಾದತ್ತ ರಾತ್ರಿ ಪ್ರಯಾಣ ಆರಂಭಿಸಿತ್ತು. ಹಿಲ್‌ ಸ್ಟೇಷನ್‌ನಿಂದ 2.5 ಕಿ.ಮೀ. ದೂರವಿರುವ ಸ್ಥಳದಲ್ಲಿ ಅ‍ಪಘಾತ ಸಂಭವಿಸುವುದಕ್ಕಿಂತ ಸ್ವಲ್ಪ ಮೊದಲು ಚಹಾ ಕುಡಿಯಲು ಬಸ್‌ ನಿಲ್ಲಿಸಲಾಗಿತ್ತು ಎಂದೂ ವಿವರಿಸಿದ್ದಾರೆ.

'ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ 17 ಮಂದಿಯನ್ನು ಅಹ್ವಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ' ಎಂದು ತಿಳಿಸಿದ್ದಾರೆ.

ಮೃತರಲ್ಲಿ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಎನ್ನಲಾಗಿದೆ.

ಮಧ್ಯಪ್ರದೇಶದ ಯಾತ್ರಿಕರು, ನಾಲ್ಕು ಬಸ್‌ಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿರುವ ಧಾರ್ಮಿಕ ಸ್ಥಳಗಳಿಗೆ 2024ರ ಡಿಸೆಂಬರ್‌ 23ರಂದು ಪ್ರವಾಸ ಆರಂಭಿಸಿದ್ದರು. ದುರದೃಷ್ಟವಶಾತ್‌ ಒಂದು ಬಸ್‌ ಕಮರಿಗೆ ಬಿದ್ದಿದೆ. ಬ್ರೇಕ್‌ ವೈಫಲ್ಯದಿಂದಾಗಿ ಹೀಗಾಗಿರಬಹುದು ಎಂದು ದಾಂಗ್‌ ಜಿಲ್ಲಾಧಿಕಾರಿ ಮಹೇಶ್‌ ಪಟೇಲ್‌ ಹೇಳಿದ್ದಾರೆ.

ಪ್ರಕರಣ ಕುರಿತು ಮಧ್ಯಪ್ರದೇಶದ ಗ್ವಾಲಿಯರ್‌ ವಲಯ ಐಜಿಪಿ ಅರವಿಂದ್‌ ಸಕ್ಸೇನಾ ಅವರೂ ಪ್ರತಿಕ್ರಿಯಿಸಿದ್ದಾರೆ. ಬಸ್‌ ಹೆಚ್ಚು ಜನರಿಂದ ತುಂಬಿತ್ತು ಎನ್ನುವಂತಹ ಸ್ಥಿತಿ ಏನೂ ಇರಲಿಲ್ಲ. 52 ಆಸನಗಳಿದ್ದ ಬಸ್‌ನಲ್ಲಿ 48 ಮಂದಿ ಇದ್ದರು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.