ADVERTISEMENT

ಅವಸರವೇ ಅಪಘಾತಕ್ಕೆ ಕಾರಣ

2019ರಲ್ಲಿ ದೇಶದಲ್ಲಿ 4.46 ಲಕ್ಷ ಅಪಘಾತ: 1.51 ಲಕ್ಷಕ್ಕೂ ಹೆಚ್ಚು ಜನರು ಸಾವು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 19:42 IST
Last Updated 21 ಅಕ್ಟೋಬರ್ 2020, 19:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೇಶದಲ್ಲಿ 2019ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಶೇ 72ಕ್ಕೂ ಹೆಚ್ಚು, ಅಪಘಾತಗಳಿಗೆ ಅತಿವೇಗವೇ ಕಾರಣ ಎಂದು ‘ಭಾರತದಲ್ಲಿ ರಸ್ತೆ ಅಪಘಾತ’ ವರದಿ ಹೇಳಿದೆ. 2019ರ ಸಾಲಿನ ವರದಿಯನ್ನು ಕೇಂದ್ರದ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವು ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಮಾಹಿತಿ ಇದೆ. 2019ರಲ್ಲಿ ದೇಶದಲ್ಲಿ 4.46 ಲಕ್ಷ ಅಪಘಾತಗಳು ಸಂಭವಿಸಿವೆ. ಅವುಗಳಲ್ಲಿ 3.26 ಲಕ್ಷಕ್ಕೂ ಹೆಚ್ಚು ಅಪಘಾತಗಳಿಗೆ ಅತಿವೇಗವೇ ಕಾರಣವಾಗಿದೆ. ಶೇ 17.1ರಷ್ಟು ಅಪಘಾತಗಳಿಗೆ ನಿಖರ ಕಾರಣವನ್ನು ಗುರುತಿಸಲು ಆಗಿಲ್ಲ.

2019ರಲ್ಲಿ ದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 1.51 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 2018ಕ್ಕೆ ಹೋಲಿಸಿದರೆ 2019ರಲ್ಲಿ ಶೇ 3.8ರಷ್ಟು ಕಡಿಮೆ ಅಪಘಾತಗಳು ಸಂಭವಿಸಿವೆ. ಆದರೆ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ ಶೇ 0.20ರಷ್ಟು ಕಡಿಮೆಯಾಗಿದೆ.ರಸ್ತೆ ಅಪಘಾತಗಳಲ್ಲಿ ಅತಿಹೆಚ್ಚು ಜನರು ಮೃತಪಟ್ಟ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ

3ನೇ ಸ್ಥಾನದಲ್ಲಿ ಬೆಂಗಳೂರು

ADVERTISEMENT

2019ರಲ್ಲಿ ಹೆಚ್ಚು ಅಪಘಾತ ಸಂಭವಿಸಿದ ನಗರಗಳ ಪಟ್ಟಿಯಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದೆ.

2019ರಲ್ಲಿ ನಗರದಲ್ಲಿ 4,684 ಅಪಘಾತಗಳು ಸಂಭವಿಸಿದ್ದು, 768 ಜನರು ಮೃತಪಟ್ಟಿದ್ದಾರೆ. 2018ರಲ್ಲಿ 4,129 ಅಪಘಾತಗಳು ಸಂಭವಿಸಿದ್ದು, 686 ಮಂದಿ ಮೃತಪಟ್ಟಿದ್ದರು. 2018ಕ್ಕೆ ಹೋಲಿಸಿದರೆ 2019ರಲ್ಲಿ ಅಪಘಾತಗಳ ಸಂಖ್ಯೆ ಶೇ 1.6ರಷ್ಟು ಮತ್ತು ಮೃತರ ಸಂಖ್ಯೆ ಶೇ 12ರಷ್ಟು ಏರಿಕೆಯಾಗಿದೆ.

ಅಪಘಾತಗಳಲ್ಲಿ ಹೆಚ್ಚು ಜನರು ಮೃತಪಟ್ಟ ನಗರಗಳ ಪಟ್ಟಿಯಲ್ಲಿ ಬೆಂಗಳೂರು 4ನೇ ಸ್ಥಾನದಲ್ಲಿದೆ. 2018ರಲ್ಲಿ 5ನೇ ಸ್ಥಾನದಲ್ಲಿತ್ತು.

ದ್ವಿಚಕ್ರವಾಹನ ಸವಾರರೇ ಹೆಚ್ಚು ಬಲಿ

ಅಪಘಾತಗಳಲ್ಲಿ ಮೃತಪಟ್ಟವರಲ್ಲಿ ದ್ವಿಚಕ್ರವಾಹನ ಸವಾರರ ಸಂಖ್ಯೆ ಅತ್ಯಧಿಕವಾಗಿದೆ. ದ್ವಿಚಕ್ರವಾಹನ ಸವಾರರು ಮೃತಪಟ್ಟ ಅಪಘಾತಗಳಲ್ಲಿ, ಅಪಘಾತಕ್ಕೆ ಕಾರಣವಾದ ವಾಹನಗಳಲ್ಲಿ ದ್ವಿಚಕ್ರವಾಹನಗಳದ್ದೇ (ಶೇ 34.2) ಸಿಂಹಪಾಲು.ದ್ವಿಚಕ್ರವಾಹನಗಳ ಅಪಘಾತಕ್ಕೆ ಕಾರಣವಾದ ವಾಹನಗಳಲ್ಲಿ ಕಾರು/ವ್ಯಾನ್‌ಗಳ ಪ್ರಮಾಣ ಶೇ 22.2 ಮತ್ತು ಟ್ರಕ್‌ಗಳ ಪ್ರಮಾಣ ಶೇ 19.1 ಇದೆ.

ಪಾದಚಾರಿಗಳ ಸಾವಿಗೆ ಕಾರಣವಾದ ವಾಹನಗಳಲ್ಲಿ ದ್ವಿಚಕ್ರವಾಹನಗಳ ಪ್ರಮಾಣ ಹೆಚ್ಚು (ಶೇ 26). ಪಾದಚಾರಿಗಳ ಸಾವಿಗೆ ಕಾರಣವಾದ ವಾಹನಗಳಲ್ಲಿ ಕಾರು/ವ್ಯಾನ್‌ಗಳ ಪ್ರಮಾಣ ಶೇ 25ರಷ್ಟು ಇದೆ. 2019ರಲ್ಲಿ ಇಡೀ ದೇಶದಲ್ಲಿ ಸೈಕಲ್‌ ಗುದ್ದಿ 195 ಪಾದಚಾರಿಗಳು ಸತ್ತಿದ್ದಾರೆ ಎಂದು ವರದಿಯಲ್ಲಿನ ದತ್ತಾಂಶ ಹೇಳುತ್ತದೆ.

ಅಪಘಾತಗಳ ಸಂಖ್ಯೆ ಇಳಿಕೆ

ವರ್ಷ;ಅಪಘಾತಗಳ ಸಂಖ್ಯೆ;ಮೃತರ ಸಂಖ್ಯೆ;ಗಾಯಾಳುಗಳು

2015;5.01ಲಕ್ಷ;1.46 ಲಕ್ಷ;5.00 ಲಕ್ಷ

2016;4.80ಲಕ್ಷ;1.50ಲಕ್ಷ;4.94 ಲಕ್ಷ

2017;4.64ಲಕ್ಷ;1.47ಲಕ್ಷ;4.70 ಲಕ್ಷ

2018;4.67ಲಕ್ಷ;1.51 ಲಕ್ಷ;4.69 ಲಕ್ಷ

2019;4.49ಲಕ್ಷ;1.51 ಲಕ್ಷ;4.69 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.