ಮುಂಬೈ: ‘ಬಾಕಿ ಹಣವನ್ನು ನೀಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎನ್ನುವ ಅನ್ವಯ್ ನಾಯ್ಕ್ ಅವರ ಬೆದರಿಕೆಯನ್ನು, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಹಾಗೂ ಇತರೆ ಆರೋಪಿಗಳು ಕಡೆಗಣಿಸಿದ್ದರು ಎಂದು 2018ರಲ್ಲಿ ನಡೆದ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಮತ್ತೊಂದೆಡೆ, ಆರೋಪಪಟ್ಟಿಯನ್ನು ಆಧರಿಸಿ ವಿಚಾರಣೆಯನ್ನು ನಡೆಸದಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಬಾಂಬೈ ಹೈಕೋರ್ಟ್‌ಗೆ ಅರ್ನಬ್ ಅವರು ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ರಾಯಗಡ್ ಜಿಲ್ಲೆಯಲ್ಲಿರುವ ಅಲಿಬಾಗ್ ಸೆಷನ್ಸ್ ನ್ಯಾಯಾಲಯಕ್ಕೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.
‘ಬಾಕಿ ಉಳಿದಿರುವ ಹಣ ನೀಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅನ್ವಯ್ ಆರೋಪಿಗಳಿಗೆ ತಿಳಿಸಿದ್ದರು. ಈ ಬೆದರಿಕೆಯನ್ನು ಕಡೆಗಣಿಸಿದ್ದ ಆರೋಪಿಗಳು, ‘ಏನು ಬೇಕಾದರೂ ಮಾಡಿಕೊ’ ಎಂದಿದ್ದರು. ಬಾಕಿ ಉಳಿದಿರುವ ಹಣವ ಸಿಗದೇ ಇದ್ದ ಕಾರಣ ಅನ್ವಯ್ ಮಾನಸಿಕ ಒತ್ತಡದಲ್ಲಿದ್ದರು. ತನ್ನ ಉದ್ಯಮದಲ್ಲಿ ತಾಯಿಯೂ ಪಾಲುದಾರಳಾಗಿದ್ದ ಕಾರಣ, ತಾನು ಆತ್ಮಹತ್ಯೆ ಮಾಡಿಕೊಂಡರೆ ತಾಯಿಗೆ ಸಮಸ್ಯೆಯಾಗಬಹುದು ಎಂದು ಅನ್ವಯ್ ಅಂದುಕೊಂಡಿದ್ದರು. ಹೀಗಾಗಿ ತಾಯಿಯನ್ನು ಕೊಂದು, ನಂತರ ಆತ್ಮಹತ್ಯೆ ಪತ್ರ ಬರೆದು ನೇಣು ಹಾಕಿಕೊಂಡಿದ್ದರು. ಪತ್ರದಲ್ಲಿರುವ ನಾಯ್ಕ್ ಅವರದೇ ಕೈಬರಹ ಎಂದು ಗುರುತಿಸಲಾಗಿದೆ’ ಎಂದೂ 1,914 ಪುಟಗಳ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳಾದ ಅರ್ನಬ್, ಫಿರೋಜ್ ಶೇಖ್ ಹಾಗೂ ನಿತೀಶ್ ಸರ್ದಾ ಅವರ ಕಂಪನಿಯು ನಾಯ್ಕ್ ಅವರ ಕಾನ್‌ಕೊರ್ಡ್ ಡಿಸೈನ್ ಪ್ರೈ.ಲಿಗೆ ಕ್ರಮವಾಗಿ ₹83 ಲಕ್ಷ, ₹4 ಕೋಟಿ ಹಾಗೂ ₹55 ಲಕ್ಷ ನೀಡಬೇಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.