ಪೋರ್ಟ್ ಬ್ಲೇರ್: ಪಶ್ಚಿಮಬಂಗಾಳದ ಬಾಗುಯಿಆಟಿ ಪ್ರದೇಶದಲ್ಲಿ ನಡೆದಿದ್ದ ಟಿಎಂಸಿ ನಾಯಕರೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಅಂಡಮಾನ್‌ನ ಪೋರ್ಟ್ ಬ್ಲೇರ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದರು.
ಟಿಎಂಸಿಯ ಎರಡು ಬಣಗಳ ನಡುವೆ ಏಪ್ರಿಲ್ 27ರಂದು ನಡೆದಿದ್ದ ಘರ್ಷಣೆಯಲ್ಲಿ ಸಂಜೀವ್ ದಾಸ್ ಅಲಿಯಾಸ್ ಪೋಟ್ಲಾ ಎಂಬುವವರು ಮೃತಪಟ್ಟಿದ್ದರು. 11 ಪ್ರಕರಣಗಳಲ್ಲಿ ದಾಸ್ ಆರೋಪಿಯಾಗಿದ್ದರು. ದಕ್ಷಿಣ ಅಂಡಮಾನ್ ಪೊಲೀಸರು ಮತ್ತು ಬಿಧಾನನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕಪಿಲ್ ದೇವ್ ಎಂಬ ಉದ್ಯಮಿಯನ್ನು ಮೇ 16ರಂದು ಪೋರ್ಟ್ ಬ್ಲೇರ್‌ನಲ್ಲಿ ಬಂಧಿಸಿದರು.
‘ಆರೋಪಿ ಕುರಿತು ಪಶ್ಚಿಮ ಬಂಗಾಳ ಪೊಲೀಸರು ಮಾಹಿತಿ ನೀಡಿದರು. ನಾವು ಕೂಡಲೇ ಶೋಧಕಾರ್ಯಕ್ಕೆ ಚಾಲನೆ ನೀಡಿದೆವು. ಇದೇ ವೇಳೆ ಪಶ್ಚಿಮ ಬಂಗಾಳ ಪೊಲೀಸರ ತಂಡವೂ ಅಂಡಮಾನ್‌ಗೆ ಆಗಮಿಸಿತು. ಜಂಟಿ ಕಾರ್ಯಾಚರಣೆ ನಡೆಸಿ ಎಬರ್‌ಡೀನ್ ಬಜಾರ್‌ನ ಹೋಟೆಲ್ ಒಂದರಲ್ಲಿ ಕಪಿಲ್ ದೇವ್‌ನನ್ನು ಬಂಧಿಸಿದೆವು’ ಎಂದು ದಕ್ಷಿಣ ಅಂಡಮಾನ್ ಪೊಲೀಸ್ ವರಿಷ್ಠಾಧಿಕಾರಿ ನಿಹಾರಿಕಾ ಭಟ್ ಅವರು ತಿಳಿಸಿದರು.
ಹತ್ಯೆ ನಡೆಸಿದ ಬಳಿಕ ಕಪಿಲ್ ದೇವ್ ಇತರರ ಜೊತೆ ಪೋರ್ಟ್ ಬ್ಲೇರ್‌ಗೆ ವಿಮಾನದ ಮೂಲಕ ತೆರಳಿದ್ದರು.
ಪ್ರಕರಣಕ್ಕೆ ಸಂಬಂಧಿಸಿ, ಮೃತ ವ್ಯಕ್ತಿಯ ಮಗಳು ನೀಡಿದ್ದ ದೂರಿನ ಆಧಾರದಲ್ಲಿ ಕಪಿಲ್ ಸೇರಿ 18 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.