ADVERTISEMENT

ಸ್ವಗ್ರಾಮ ತಲುಪಿದ ಮಾಜಿ ಸಿಎಂ ಅಚ್ಯುತಾನಂದನ್ ಪಾರ್ಥಿವ ಶರೀರ: ಇಂದು ಅಂತ್ಯಕ್ರಿಯೆ

ಪಿಟಿಐ
Published 23 ಜುಲೈ 2025, 6:27 IST
Last Updated 23 ಜುಲೈ 2025, 6:27 IST
   

ಅಲಪ್ಪುಳ: ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಅವರ ಪಾರ್ಥಿವ ಶರೀರ ಬುಧವಾರ ಬೆಳಿಗ್ಗೆ ಅವರ ಹುಟ್ಟೂರು ಅಲಪ್ಪುಳ ತಲುಪಿದೆ.

8 ದಶಕಗಳ ತಮ್ಮ ರಾಜಕೀಯ ಜೀವನದಲ್ಲಿ ಕಾರ್ಮಿಕ ವರ್ಗದ ಪರ ನಿರಂತರವಾಗಿ ಹೋರಾಡಿದ ಮಾರ್ಕ್ಸ್‌ವಾದಿ ನಾಯಕನಿಗೆ ಅಂತಿಮ ನಮನ ಸಲ್ಲಿಸಲು ಅಪಾರ ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ಇದರಿಂದಾಗಿ ಅವರ ಪಾರ್ಥಿವ ಶರೀರ ಹುಟ್ಟೂರು ತಲುಪುವುದು ವಿಳಂಬವಾಯಿತು ಎಂದು ಮೂಲಗಳು ತಿಳಿಸಿವೆ.

ಅಚ್ಯುತಾನಂದನ್ ಅವರ ಪಾರ್ಥಿವ ಶರೀರವನ್ನು ಹೊತ್ತ ವಾಹನ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ತಿರುವನಂತಪುರದಿಂದ ಹೊರಟಿತ್ತು. ಬುಧವಾರ ಬೆಳಿಗ್ಗೆ 6.45ರ ವೇಳೆಗೆ ಅದು ಅಲಪ್ಪುಳ ತಲುಪಿತು. ಅಚ್ಯುತಾನಂದನ್ ಅವರ ಅಂತಿಮ ದರ್ಶನ ಪಡೆಯಲು ದಾರಿಯುದ್ದಕ್ಕೂ ಅಪಾರ ಅಭಿಮಾನಿಗಳು ನೆರೆದಿದ್ದರಿಂದ ವಿಳಂಬವಾಯಿತು. ರಾತ್ರಿ ಮತ್ತು ಮಳೆಯನ್ನು ಲೆಕ್ಕಿಸದೆ, ಸಾವಿರಾರು ರಸ್ತೆಗಳಲ್ಲಿ ಕಾದು ನಿಂತು ಗೌರವ ಸಲ್ಲಿಸಿದರು. ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ವಲಿಯ ಚುಡುಕಾಡು ಸ್ಮಶಾನದಲ್ಲಿ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

ಕೆಲ ವರ್ಷಗಳಿಂದ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅಚ್ಯುತಾನಂದನ್, ಸಕ್ರಿಯ ರಾಜಕೀಯದಿಂದ ದೂರವಿದ್ದರು. ಜೂನ್‌ 23ರಂದು ಅವರಿಗೆ ಹೃದಯಾಘಾತವಾಗಿತ್ತು. ಅವರನ್ನು ತಿರುವನಂತರಪುರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಜೀವರಕ್ಷಕ ವ್ಯವಸ್ಥೆಯಲ್ಲಿಟ್ಟು ಆರೈಕೆ ಮಾಡಲಾಗುತ್ತಿತ್ತು. ಸೋಮವಾರ(ಜುಲೈ 21) ಮಧ್ಯಾಹ್ನ ನಿಧನರಾದರು.

ವಿ.ಎಸ್‌. ಎಂದೇ ಜನಪ್ರಿಯರಾಗಿದ್ದ ಅವರು, 2006ರಿಂದ 2011ರವರೆಗೆ ಕೇರಳದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. 1992–1996, 2001ರಿಂದ 2006 ಮತ್ತು 2011ರಿಂದ 2016ರವರೆಗೂ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. 1980ರಿಂದ 1992ರವರೆಗೆ ಅವರು ಸಿಪಿಎಂ ರಾಜ್ಯ ಮಂಡಳಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಎದುರಿಸಿದ 10 ಚುನಾವಣೆಗಳ ಪೈಕಿ ಅವರು ಕೇವಲ ಮೂರರಲ್ಲಿ ಸೋತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.