ADVERTISEMENT

‘ದಿ ಕಾಶ್ಮೀರ್ ಫೈಲ್ಸ್‌’ ಸಿನಿಮಾಕ್ಕೆ ಟಾಂಗ್ ಕೊಟ್ಟ ನಟ ಪ್ರಕಾಶ್ ರಾಜ್

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 3:12 IST
Last Updated 20 ಮಾರ್ಚ್ 2022, 3:12 IST
 ಪ್ರಕಾಶ್ ರಾಜ್ (ಬಲ ಭಾಗದಲ್ಲಿ)
ಪ್ರಕಾಶ್ ರಾಜ್ (ಬಲ ಭಾಗದಲ್ಲಿ)   

ಬೆಂಗಳೂರು: ದೇಶದಾದ್ಯಂತ ಪರ–ವಿರೋಧದ ಚರ್ಚೆ ಹುಟ್ಟುಹಾಕಿರುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್‌’ ಸಿನಿಮಾ ಬಗ್ಗೆ ನಟ ಪ್ರಕಾಶ್ ರಾಜ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಅವರು 6 ಸಂಗತಿಗಳನ್ನು ಹೆಸರಿಸಿ ಅವುಗಳ ಬಗ್ಗೆ ಫೈಲ್ಸ್‌ಗಳು ಯಾವಾಗ ತೆರೆದುಕೊಳ್ಳುತ್ತವೆ? ಎಂದು ಕೇಳಿದ್ದಾರೆ.

‘ನಿರ್ಮಾಪಕರಾಗಿ ಬದಲಾದ ಪ್ರೀತಿಯ ನಟರೇ, ‘ಗೋದ್ರಾ ಫೈಲ್ಸ್’, ‘ದೆಹಲಿ ಫೈಲ್ಸ್’, ‘ಜಿಎಸ್‌ಟಿ ಫೈಲ್ಸ್’, ‘ನೋಟು ಅಮಾನ್ಯೀಕರಣದ ಫೈಲ್ಸ್’, ‘ಕೋವಿಡ್ ಫೈಲ್ಸ್’ ಹಾಗೂ ‘ಗಂಗಾ ಫೈಲ್ಸ್’ ಬಗ್ಗೆ ಯಾವಾಗ ಸಿನಿಮಾ ಮಾಡುತ್ತೀರಾ? ಎಂದು ಕೆಣಕಿದ್ದಾರೆ.

ಪ್ರಕಾಶ್ ರಾಜ್ ಅವರ ಈ ಟ್ವೀಟ್ ಬಗ್ಗೆ ಅನೇಕರು ತಿರುಗೇಟು ನೀಡಿ, ‘ನೀವೇ ಸಿನಿಮಾ ಮಾಡಿ ತೋರಿಸಿ’ ಎಂದು ಸವಾಲು ಹಾಕಿದ್ದಾರೆ. ಇನ್ನೂ ಕೆಲವರು ಪ್ರಕಾಶ್ ರಾಜ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್‌’ ಸಿನಿಮಾ ಕಾಶ್ಮೀರಿ ಪಂಡಿತರ ಹತ್ಯೆಯ ವಿಚಾರವನ್ನು ಹೊಂದಿದ್ದು, ಕೆಲವರು ಸತ್ಯ ಇವಾಗ ಹೊರ ಬಂದಿದೆ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಇದು ಹಿಂದೂ–ಮುಸ್ಲಿಂ ನಡುವೆ ದ್ವೇಷ ಹುಟ್ಟುಹಾಕುವ ಯತ್ನ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.