ADVERTISEMENT

ಪಂಜಾಬ್ ಚುನಾವಣೆ: ನಟ ಸೋನು ಸೂದ್ ಸಹೋದರಿ ಕಾಂಗ್ರೆಸ್‌ಗೆ ಸೇರ್ಪಡೆ

ಪಿಟಿಐ
Published 10 ಜನವರಿ 2022, 14:10 IST
Last Updated 10 ಜನವರಿ 2022, 14:10 IST
ನಟ ಸೋನು ಸೂದ್ ಹಾಗೂ ಅವರ ಸಹೋದರಿ ಮಾಳವಿಕಾ ಸೂದ್ (ಕೃಪೆ: ಸೋನು ಸೂದ್ ಇನ್‌ಸ್ಟಾಗ್ರಾಂ)
ನಟ ಸೋನು ಸೂದ್ ಹಾಗೂ ಅವರ ಸಹೋದರಿ ಮಾಳವಿಕಾ ಸೂದ್ (ಕೃಪೆ: ಸೋನು ಸೂದ್ ಇನ್‌ಸ್ಟಾಗ್ರಾಂ)   

ಚಂಡೀಗಡ: ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್‌ನ ಪಂಜಾಬ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಮಾಳವಿಕಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ, ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹಾಜರಿದ್ದರು.

ಈ ಬೆಳವಣಿಗೆಯು ಪಂಜಾಬ್‌ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಸಿಧು ಹೇಳಿದ್ದಾರೆ.

ADVERTISEMENT

‘ಪಕ್ಷದ ಮುಖ್ಯಸ್ಥರು ಮತ್ತು ಮುಖ್ಯಮಂತ್ರಿಗಳು ಜತೆಯಾಗಿ ಒಬ್ಬರ ಮನೆಗೆ ತೆರಳಿ ಗೌರವಿಸುವುದು ಅಪರೂಪ. ಮಾಳವಿಕಾ ಅದಕ್ಕೆ ಅರ್ಹರು’ ಎಂದು ಸಿಧು ಹೇಳಿದ್ದಾರೆ.

ಪಂಜಾಬ್‌ನ ಮೊಗಾ ಜಿಲ್ಲೆಯಲ್ಲಿರುವ ಸೋನು ಸೂದ್ ನಿವಾಸದಲ್ಲೇ ಪಕ್ಷಕ್ಕೆ ಸೇರ್ಪಡೆಯಾಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಾಳವಿಕಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಚನ್ನಿ, ಅದನ್ನು ಪಕ್ಷ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.

ಸೋನು ಸೂದ್ ಹಾಗೂ ಸಿಧು ಜತೆಗೆ ಕುಳಿತು ಚರ್ಚಿಸುತ್ತಿರುವ ಫೋಟೊವನ್ನು ಟ್ವೀಟ್ ಮಾಡಿರುವ ಪಂಜಾಬ್ ಯುವ ಕಾಂಗ್ರೆಸ್, ಪಂಬಾಜ್ ಭವಿಷ್ಯಕ್ಕೆ ಸಿದ್ಧವಾಗುತ್ತಿದೆ ಎಂದು ಉಲ್ಲೇಖಿಸಿದೆ.

ಚರಣ್‌ಜಿತ್ ಸಿಂಗ್ ಚನ್ನಿ ಸಹ ಮಾಳವಿಕಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಲಾಕ್‌ಡೌನ್‌ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದವರು, ವಲಸೆ ಕಾರ್ಮಿಕರು ಸುರಕ್ಷಿತವಾಗಿ ಊರುಗಳಿಗೆ ಮರಳಲು ಬಸ್ಸು, ವಿಮಾನದ ವ್ಯವಸ್ಥೆಯನ್ನು ಸೋನು ಸೂದ್‌ ಮಾಡಿದ್ದರು. ತಮ್ಮ ಸ್ವಂತ ಖರ್ಚಿನಲ್ಲಿ ವಾಹನ ವ್ಯವಸ್ಥೆ ಮಾಡಿದ್ದಲ್ಲದೇ ಆರ್ಥಿಕ ಸಹಾಯವನ್ನೂ ನೀಡಿದ್ದರು. ಸೋನು ಅವರ ಈ ಕಾರ್ಯಕ್ಕೆ ದೇಶವೇ ತಲೆದೂಗಿತ್ತು. ರಾಜಕಾರಣಿಗಳು, ಸಿನಿಮಾರಂಗದವರು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಕೂಡ ಸೋನು ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.