
ಚೆನ್ನೈ (ಪಿಟಿಐ): ನಟ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
‘ನನ್ನ ಪತಿಯು ನಟಿಯೊಬ್ಬರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ. ನನಗೆ ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದು, ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಚೆಂಗಲ್ಪಟ್ಟು ಜಿಲ್ಲೆಯ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಏ. 10ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಈ ಪ್ರಕರಣದ ವಿಚಾರಣೆಯ ವಿಡಿಯೊ ಚಿತ್ರೀಕರಣ ಮಾಡುವಂತೆ ಸಂಗೀತಾ ಅವರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
‘ವಿಜಯ್ ಅವರು 2021ರಿಂದಲೂ ನನ್ನನ್ನು ಭಾವನಾತ್ಮಕವಾಗಿ ದೂರವಿಟ್ಟಿದ್ದಾರೆ. ಮನೆ ಬಿಟ್ಟು ಹೋಗುವಂತೆ ಹೇಳಿದ್ದರು. ಅದಕ್ಕೆ ಸ್ಪಂದಿಸದಿದ್ದಾಗ ಪ್ರತ್ಯೇಕವಾಗಿ ವಾಸಿಸುವಂತೆ ಒತ್ತಾಯಿಸಿದರು. ಆದರೆ, ನಟಿಯೊಂದಿಗೆ ಮುಕ್ತ ಒಡನಾಟ ಹೊಂದಿದ್ದರು’ ಎಂದು ಅರ್ಜಿಯಲ್ಲಿ ದೂರಿದ್ದಾರೆ.
‘ಸಾರ್ವಜನಿಕವಾಗಿ ಮುಜುಗರಕ್ಕೊಳಗಾಗುವುದನ್ನು ತಪ್ಪಿಸಲು ವಕೀಲರ ಮೂಲಕ ಸೌಹಾರ್ದಯುತ ನಿರ್ಣಯಕ್ಕಾಗಿ 2024ರ ಆಗಸ್ಟ್‌ನಿಂದ 2025ರ ಫೆಬ್ರುವರಿ ನಡುವೆ ವಿಜಯ್‌ಗೆ ಹಲವು ನೋಟಿಸ್ ನೀಡಿದ್ದು, ಪತ್ರ ವ್ಯವಹಾರವನ್ನೂ ನಡೆಸಿದ್ದೇನೆ’ ಎಂದಿದ್ದಾರೆ.
ವಿಜಯ್– ಸಂಗೀತಾ ವಿವಾಹವನ್ನು ಲಂಡನ್‌ನಲ್ಲಿ 1998ರ ಜುಲೈ 10ರಂದು ನೋಂದಾಯಿಸಲಾಗಿತ್ತು. 1999ರ ಆ. 25ರಂದು ಚೆನ್ನೈನಲ್ಲಿ ವಿಧ್ಯುಕ್ತವಾಗಿ ಮದುವೆ ನಡೆದಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.