ADVERTISEMENT

ತನಿಷ್ಕ್‌ಗೆ ಜಾಹೀರಾತು ಸಂಸ್ಥೆಗಳ ಬೆಂಬಲ: 'ಸೃಜನಶೀಲ ಸ್ವಾತಂತ್ರ್ಯ'ದ ಪ್ರಸ್ತಾಪ

ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2020, 3:08 IST
Last Updated 15 ಅಕ್ಟೋಬರ್ 2020, 3:08 IST
ತನಿಷ್ಕ್ ಜಾಹೀರಾತು (ಸಂಗ್ರಹ ಚಿತ್ರ)
ತನಿಷ್ಕ್ ಜಾಹೀರಾತು (ಸಂಗ್ರಹ ಚಿತ್ರ)   

ನವದೆಹಲಿ: ‘ತನಿಷ್ಕ್ ರೂಪಿಸಿದ್ದ ಸೀಮಂತದ ಜಾಹೀರಾತಿನಲ್ಲಿ ಅಸಭ್ಯ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುವಂಥದ್ದು ಏನೂ ಇರಲಿಲ್ಲ. ಮುಕ್ತ ಸೃಜನಶೀಲಅಭಿವ್ಯಕ್ತಿಯ ಮೇಲೆ ಇಂಥ ಆಧಾರವಿಲ್ಲದ ಮತ್ತು ಅಪ್ರಸ್ತುತ ದಾಳಿಯು ಆತಂಕ ಉಂಟು ಮಾಡಿದೆ’ ಎಂದು ದೇಶದ ಅತ್ಯುನ್ನತ ಜಾಹೀರಾತು ಸಂಸ್ಥೆಗಳು ‘ತನಿಷ್ಕ್‌’ಗೆ ಬೆಂಬಲ ಸೂಚಿಸಿ ಹೇಳಿಕೆ ನೀಡಿವೆ.

‘ತನಿಷ್ಕ್ ರೂಪಿಸಿದ್ದ ಜಾಹೀರಾತು ಒಂದು ಕೋಮನ್ನು ಓಲೈಸುವಂತಿದೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟ್ರೋಲಿಂಗ್ ನಡೆದಿತ್ತು. ಕೆಲ ಸಿಬ್ಬಂದಿ ಜೀವಬೆದರಿಕೆಯನ್ನೂ ಎದುರಿಸಿದ್ದರು. ಒತ್ತಾಯಕ್ಕೆ ಮಣಿದ ತನಿಷ್ಕ್ ಜಾಹೀರಾತು ಹಿಂಪಡೆದಿತ್ತು.

ಭಾರತೀಯ ಮಾಧ್ಯಮ ಮತ್ತು ಜಾಹೀರಾತು ಉದ್ಯಮದ ಪರವಾಗಿ ಹೇಳಿಕೆ ನೀಡಿರುವ ‘ದಿ ಅಡ್ವರ್ಟೈಸಿಂಗ್ ಕ್ಲಬ್’, ಉದ್ಯೋಗಿಗಳಿಗೆ ಬೆದರಿಕೆ ಹಾಕಿರುವುದನ್ನು ಖಂಡಿಸಿದೆ.

ಜಾಹೀರಾತು ಹಿಂಪಡೆಯುವಂತೆ ಮಾಡಿದ ಒತ್ತಾಯವನ್ನು ‘ದುರದೃಷ್ಟಕರ’ ಎಂದು ಬಣ್ಣಿಸಿರುವ ಇಂಟರ್‌ನ್ಯಾಷನಲ್ ಅಡ್ವರ್ಟೈಸಿಂಗ್ ಅಸೋಸಿಯೇಷನ್, ‘ಬೆದರಿಕೆ ಹಾಕಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದೆ.

‘ಎಲ್ಲರ ಅಭಿಪ್ರಾಯಗಳನ್ನೂ ನಾವು ಗೌರವಿಸುತ್ತೇವೆ. ಆದರೆ ಇದು ಸಮಾಜ ವಿರೋಧಿ ಬೆದರಿಕೆಯ ನಡವಳಿಕೆಗಳಾಗಬಾರದು. ಇಂಥ ಬೆದರಿಕೆಗಳನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ, ಶಿಸ್ತುಕ್ರಮ ಜರುಗಿಸಬೇಕು. ಸುರಕ್ಷಿತ ವಾತಾವರಣದಲ್ಲಿ ವ್ಯಾಪಾರ ನಡೆಸಲು, ತಮ್ಮ ಬ್ರಾಂಡ್‌ಗಳ ಬಗ್ಗೆ ಜಾಹೀರಾತಿನ ಮೂಲಕ ಸಂದೇಶ ರವಾನಿಸಲು ಮುಕ್ತ ಅವಕಾಶ ಒದಗಿಸಬೇಕು’ ಎಂದು ಸಂಸ್ಥೆಯು ಒತ್ತಾಯಿಸಿದೆ.

ತನಿಷ್ಕ್ ಕಳೆದ ವಾರ ಬಿಡುಗಡೆ ಮಾಡಿದ್ದ ಜಾಹೀರಾತು ‘ಲವ್ ಜಿಹಾದ್‌ಗೆ ಉತ್ತೇಜನ ನೀಡುವಂತಿದೆ’ ಎಂದು ಕೆಲವರು ಹರಿಹಾಯ್ದಿದ್ದರು. ಹಲವರು ಜಾಹೀರಾತು ಸಮರ್ಥಿಸಿಕೊಂಡು, ದ್ವೇಷ ಬಿತ್ತುವ ಮೆಸೇಜ್‌ಗಳನ್ನು ಖಂಡಿಸಿದ್ದರು. ‘ಮಳಿಗೆ ಸಿಬ್ಬಂದಿ, ಸಹವರ್ತಿಗಳು ಮತ್ತು ಉದ್ಯೋಗಿಗಳ ಹಿತದೃಷ್ಟಿಯಿಂದ ಜಾಹೀರಾತನ್ನು ಹಿಂಪಡೆಯುತ್ತಿದ್ದೇವೆ’ ಎಂದು ತನಿಷ್ಕ್ ಹೇಳಿಕೆ ನೀಡಿತ್ತು.

ಈ ಬೆಳವಣಿಗೆಯು ಸಾಮಾಜಿಕ ಮಾಧ್ಯಮಗಳಲ್ಲಿ 'ಮುಕ್ತ ಸೃಜನಶೀಲಅಭಿವ್ಯಕ್ತಿ'ಯ ವಿಚಾರವನ್ನು ಮುನ್ನೆಲೆಗೆ ತಂದಿದೆ.ಚರ್ಚೆಯು ಮತ್ತೊಂದು ಮಗ್ಗುಲಿಗೆ ಹೊರಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.