ADVERTISEMENT

ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಅದಾನಿ ಸಮೂಹದ ನೆರವು: ಕಾಂಗ್ರೆಸ್‌ ಆರೋಪ

ಪಿಟಿಐ
Published 7 ಮಾರ್ಚ್ 2023, 19:02 IST
Last Updated 7 ಮಾರ್ಚ್ 2023, 19:02 IST
..
..   

ನವದೆಹಲಿ (ಪಿಟಿಐ): ‘ಅದಾನಿ ಸಮೂಹವು ಭಾರತದ ವಿದ್ಯುತ್‌ ವಲಯದ ಗ್ರಾಹಕರಿಂದ ದುಬಾರಿ ಶುಲ್ಕ ವಸೂಲಿ ಮಾಡಿ, ಆ ಹಣವನ್ನು ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವುದಕ್ಕಾಗಿ ವಿನಿಯೋಗಿಸುತ್ತಿದೆ’ ಎಂದು ಕಾಂಗ್ರೆಸ್‌ ಮಂಗಳವಾರ ಆರೋಪಿಸಿದೆ.

‘ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ವಿರೋಧಿಗಳ ಮೇಲೆ ಆರೋಪ ಕೇಳಿಬಂದ ಕೂಡಲೇ ತನಿಖೆ ಕೈಗೊಳ್ಳಲು ಅತ್ಯುತ್ಸಾಹ ತೋರುವ ತನಿಖಾ ಸಂಸ್ಥೆಗಳು ಅದಾನಿ ಸಮೂಹದ ಅಪಾರದರ್ಶಕ ವಹಿವಾಟಿನ ಕುರಿತು ತನಿಖೆ ನಡೆಸಲು ಮೀನಮೇಷ ಎಣಿಸುತ್ತಿರುವುದು ಏಕೆ’ ಎಂದು ಪ್ರಶ್ನಿಸಿದೆ.

ಟ್ವೀಟ್‌ ಸರಣಿಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಮೂರು ಪ್ರಶ್ನೆಗಳನ್ನು ಇಟ್ಟಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌, ‘ಅದಾನಿ ಸಮೂಹದ ವಿದ್ಯುತ್‌ ವಲಯದಲ್ಲಿರುವ ಕುತಂತ್ರಿಗಳು ಬಿಜೆಪಿಯ ಚುನಾವಣಾ ವೆಚ್ಚದ ಹೊರೆಯನ್ನು ಭಾರತದ ವಿದ್ಯುತ್‌ ಗ್ರಾಹಕರ ಮೇಲೆ ಹೇರುತ್ತಿದ್ದಾರೆ’ ಎಂದು ದೂರಿದ್ದಾರೆ.

ADVERTISEMENT

‘2020ರ ಫೆಬ್ರುವರಿಯಲ್ಲಿ ಮುಂಬೈನ ಅದಾನಿ ಎಲೆಕ್ಟ್ರಿಸಿಟಿ ಕಂಪನಿಯು ಏಷ್ಯಾದ ಹೂಡಿಕೆದಾರರಿಂದ ₹7,200 ಕೋಟಿ ಮೊತ್ತ ಸಂಗ್ರಹಿಸಿದೆ. ಚೀನಾದಿಂದಲೂ ಅದು ಹಣ ಪಡೆದಿರುವ ಸಾಧ್ಯತೆ ಇದೆ’ ಎಂದು ಆರೋಪಿಸಿದ್ದಾರೆ.

‘ಬಿಜೆಪಿ ಸರ್ಕಾರಗಳು ‘ಡಬಲ್‌ ವಾಷಿಂಗ್‌ ಮಷಿನ್‌’ ಇದ್ದಂತೆ’
ನವದೆಹಲಿ (ಪಿಟಿಐ):
‘ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳು ‘ಡಬಲ್‌ ವಾಷಿಂಗ್‌ ಮಷಿನ್‌’ ಇದ್ದಂತೆ. ಹಿಂದೆ ಮಾಡಿದ ಪಾಪಗಳೆಲ್ಲವೂ ಅಲ್ಲಿ ಶುದ್ಧೀಕರಿಸಲ್ಪಡುತ್ತವೆ’ ಎಂದು ಕಾಂಗ್ರೆಸ್‌ ಮಂಗಳವಾರ ಆರೋಪಿಸಿದೆ.

‘ವಾಷಿಂಗ್‌ ಪೌಡರ್‌ ಬಿಜೆಪಿ’ ಹೆಸರಿನ ಚಿತ್ರವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್‌ ರಮೇಶ್‌, ‘ಬಿಜೆಪಿಯು ಹಾಲಿನಂತ ಬಿಳುಪು ಬರಿಸಿಕೊಂಡಿದ್ದು, ಅಲ್ಲಿ ಕಳಂಕಿತ ನಾಯಕರೂ ಹೊಳೆಯುವಂತೆ ಕಾಣುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಈಶಾನ್ಯ ರಾಜ್ಯಗಳಾದ ಮೇಘಾಲಯ, ತ್ರಿಪುರಾ ಹಾಗೂ ನಾಗಾಲ್ಯಾಂಡ್‌ನಲ್ಲಿ ಮೈತ್ರಿ ಸರ್ಕಾರಗಳು ಅಸ್ತಿತ್ವಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಜೈರಾಮ್‌, ‘ಮೋದಿ ಅವರು ಮಂಗಳವಾರ ಈಶಾನ್ಯ ರಾಜ್ಯಗಳಲ್ಲಿ ‘ಡಬಲ್‌ ಎಂಜಿನ್‌’ ಎಂದು ಕರೆಯಲ್ಪಡುವ ಸರ್ಕಾರಗಳಿಗೆ ಚಾಲನೆ ನೀಡಿದ್ದಾರೆ. ಬಿಜೆಪಿ ಆಡಳಿತವುಳ್ಳ ರಾಜ್ಯಗಳಲ್ಲಿನ ಸರ್ಕಾರಗಳು ‘ಡಬಲ್‌ ಎಂಜಿನ್‌’ ಅಲ್ಲ. ಅವು ‘ಡಬಲ್‌ ವಾಷಿಂಗ್‌ ಮಷಿನ್‌’ ಸರ್ಕಾರಗಳು. ಅಲ್ಲಿ ಹಿಂದಿನ ಪಾಪಗಳೆಲ್ಲವೂ ತೊಳೆಯಲ್ಪಡುತ್ತವೆ’ ಎಂದು ದೂರಿದ್ದಾರೆ.

‘ಚುನಾವಣೆ ಸಮಯದಲ್ಲಿ ಕಾನ್ರಾಡ್‌ ಸಂಗ್ಮಾ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಬಿಜೆಪಿಯು ಈಗ ಅವರ ಪಕ್ಷದ ಜೊತೆ ಕೈಜೋಡಿಸುವ ಮೂಲಕ ಮೇಘಾಲಯದಲ್ಲಿ ಹೊಸ ಸರ್ಕಾರ ರಚಿಸಿದೆ’ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ತಲಾ ಆದಾಯ ಹೆಚ್ಚಳ ಬಿಜೆಪಿಯ ಪ್ರಚಾರತಂತ್ರ: ಮಲ್ಲಿಕಾರ್ಜುನ ಖರ್ಗೆ
ನವದೆಹಲಿ (ಪಿಟಿಐ):
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಭಾರತದ ತಲಾ ಆದಾಯ ಶೇ 99ರಷ್ಟು ಹೆಚ್ಚಳವಾಗಿದೆ ಎಂದು ಬಿಂಬಿಸುತ್ತಿರುವುದು ಬಿಜೆಪಿಯ ಪ್ರಚಾರ ತಂತ್ರವಷ್ಟೇ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಜನರ ಆದಾಯದ ಏರಿಕೆಯನ್ನು ಕಾಯ್ದುಕೊಳ್ಳಲು ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿದ್ದ ಸಮಗ್ರ ರಕ್ಷಣಾ ಕ್ರಮಗಳು ಬಿಜೆಪಿಯ ಅವಧಿಗಿಂತಲೂ ಹೆಚ್ಚು ಬಲಿಷ್ಠವಾಗಿದ್ದವು ಎಂದು ಅವರು ಹೇಳಿದ್ದಾರೆ.

‘ತಲಾ ಆದಾಯ ವಿಚಾರದಲ್ಲಿ ಬಿಜೆಪಿಯ ಪ್ರಚಾರ ತಂತ್ರಗಾರಿಕೆಗೆ ಬಲಿಯಾಗಬೇಡಿ’ ಎಂದು ಹೇಳಿರುವ ಅವರು, 2004–2014ರ
ಅವಧಿಯಲ್ಲಿ ಯುಪಿಎ ಸರ್ಕಾರದ ಆಡಳಿತದಲ್ಲಿ ದೇಶದ ತಲಾ ಆದಾಯ ಶೇ 258.8ರಷ್ಟು ಹೆಚ್ಚಳವಾಗಿತ್ತು ಎಂಬುದನ್ನು ಸೂಚಿಸುವ ನಕ್ಷೆಯನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.