ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ರಾಯ್‌ಬರೇಲಿ: ಅಮೆರಿಕ ಭೇಟಿಯ ವೇಳೆ ಅದಾನಿ ಪ್ರಕರಣ ಖಾಸಗಿ ವಿಷಯ ಎಂದು ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
'ಪ್ರಧಾನಿ ಅವರೇ, ಅದಾನಿ ವಿಷಯ ಖಾಸಗಿಯಲ್ಲ, ಬದಲಾಗಿ ದೇಶದ ವಿಷಯವಾಗಿದೆ' ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ತಾವು ಪ್ರತಿನಿಧಿಸುವ ರಾಯ್‌ಬರೇಲಿ ಕ್ಷೇತ್ರಕ್ಕೆ ಎರಡು ದಿನಗಳ ಭೇಟಿ ಕೈಗೊಂಡಿರುವ ರಾಹುಲ್, ಲಾಲ್‌ಗಂಜ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
'ಇದೊಂದು ಖಾಸಗಿ ವಿಷಯ ಎಂದು ನಮ್ಮ ಪ್ರಧಾನಿ ಹೇಳುತ್ತಿದ್ದಾರೆ. ಆದರೆ ಈ ಕುರಿತು ಚರ್ಚಿಸಲು ಸಿದ್ಧರಿಲ್ಲ. ಅವರು ದೇಶದ ನೈಜ ಪ್ರಧಾನಿಯಾಗಿದ್ದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಲ್ಲಿ ಪ್ರಕರಣದ ಕುರಿತಾಗಿ ವಿಚಾರಿಸುತ್ತಿದ್ದರು. ಅಗತ್ಯವಿದ್ದರೆ ವಿಚಾರಣೆಗೆ ಒಳಪಡಿಸಲು ಹೇಳುತ್ತಿದ್ದರು. ಆದರೆ ಮೋದಿ ಖಾಸಗಿ ವಿಷಯ ಎಂದು ಹೇಳಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ' ಎಂದು ರಾಹುಲ್ ಆರೋಪಿಸಿದ್ದಾರೆ.
'ಅಮೆರಿಕದ ಕೋರ್ಟ್‌ನಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಮೊಕದ್ದಮೆ ದಾಖಲಾಗಿರುವುದು ಖಾಸಗಿ ವಿಷಯ. ಎರಡು ದೇಶಗಳ ನಾಯಕರು ಇಂತಹ ಖಾಸಗಿ ಸಂಗತಿ ಚರ್ಚಿಸಲು ಭೇಟಿಯಾಗುವುದಿಲ್ಲ' ಎಂದು ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದರು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಚರ್ಚೆಯಲ್ಲಿ ಇಂತಹ ವಿಷಯವೂ ಚರ್ಚೆಯಾಯಿತೇ ಎಂಬ ಸುದ್ದಿಗಾರರ ಪ್ರಶ್ನೆಗೆ ಮೋದಿ, 'ಉಭಯ ದೇಶಗಳ ನಾಯಕರು ಎಂದಿಗೂ ಇಂತಹ ವಿಷಯಗಳನ್ನು ಚರ್ಚಿಸುವುದಿಲ್ಲ' ಎಂದು ಹೇಳಿದ್ದರು.
ಅದಾನಿ ವಿಷಯದ ಕುರಿತಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಹೇಳಿಕೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.