ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಪಿಟಿಐ
ಲಖನೌ: ದೇಶದ ಜನರ ಧಾರ್ಮಿಕ ಭಾವನೆಗಳೊಂದಿಗೆ ಸಮಾಜವಾದಿ ಪಕ್ಷವು (ಎಸ್‌ಪಿ) ಆಟವಾಡುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಮಾತಾ ಪ್ರಸಾದ್ ಪಾಂಡೆ ಆದಿತ್ಯನಾಥ್ ಅವರನ್ನು ಕೋಮುವಾದಿ ಎಂದು ಕರೆದ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.
ಸದನವನ್ನು ಉದ್ದೇಶಿಸಿ ಭಾಷಣ ಮಾಡಿದ ಆದಿತ್ಯನಾಥ್, 'ದೇಶವು ಎಲ್ಲಿಯವರೆಗೆ ರಾಮ, ಕೃಷ್ಣ ಮತ್ತು ಆದಿ ಶಂಕರಾಚಾರ್ಯರನ್ನು ಮಾರ್ಗದರ್ಶಕರನ್ನಾಗಿ ಪರಿಗಣಿಸುತ್ತದೆಯೋ ಅಲ್ಲಿಯವರೆಗೆ ಯಾವುದೇ ಶಕ್ತಿಗೂ ದೇಶಕ್ಕೆ ಹಾನಿಯನ್ನುಂಟು ಮಾಡಲು ಸಾಧ್ಯವಿಲ್ಲ' ಎಂದು ಸಮಾಜವಾದಿ ನಾಯಕ ರಾಮ್ ಮನೋಹರ್ ಲೋಹಿಯಾ ಅವರ ಹೇಳಿಕೆಯನ್ನು ಉಲ್ಲೇಖಿಸಿದರು.
‘ಈ ಮೂವರು ಮಹಾನ್ ವ್ಯಕ್ತಿಗಳು ದೇಶದ ಏಕತೆಯ ಅಡಿಪಾಯವನ್ನು ರೂಪಿಸುತ್ತಾರೆ. ಈ ದೇಶದ ಜನರು ಅವರನ್ನು ಗೌರವಿಸುವವರೆಗೆ, ಭಾರತವು ಬಲಿಷ್ಠವಾಗಿ ಉಳಿಯುತ್ತದೆ’ಎಂದು ಅವರು ಹೇಳಿದ್ದಾರೆ.
ಇಂದಿನ ಸಮಾಜವಾದಿ ಪಕ್ಷವು ಲೋಹಿಯಾ ಅವರ ಮೌಲ್ಯಗಳು ಮತ್ತು ಆದರ್ಶಗಳಿಂದ ದೂರ ಸರಿದಿದೆ ಎಂದು ಆದಿತ್ಯನಾಥ್ ಆರೋಪಿಸಿದ್ದಾರೆ.
‘ನೀವು (ಎಸ್‌ಪಿ) ದೇಶದ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುತ್ತಿದ್ದೀರಿ. ನಮ್ಮ ಚಿಂತನೆಗಳನ್ನು ಕೋಮುವಾದ ಎಂದು ಕರೆಯುತ್ತೀರಿ. ನಾವು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯಲ್ಲಿ ನಂಬಿಕೆ ಇಟ್ಟಿದ್ದೇವೆ. ನಮ್ಮ ಮಾರ್ಗದರ್ಶಿ ತತ್ವ ‘ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯ’ (ಎಲ್ಲರೂ ಸಂತೋಷವಾಗಿರಲಿ, ಎಲ್ಲರೂ ಅನಾರೋಗ್ಯದಿಂದ ಮುಕ್ತರಾಗಲಿ) ಎಂಬುದಾಗಿದೆ. ಅದು ಹೇಗೆ ಕೋಮುವಾದವಾಗುತ್ತದೆ? ಎಂದು ಆದಿತ್ಯನಾಥ್ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.