ADVERTISEMENT

ಭಾರತಕ್ಕೆ ಬರುವ ಅಫ್ಗನ್ನರಿಗೆ 6 ತಿಂಗಳಿಗೆ ವೀಸಾ, ಬಳಿಕ ಸೌಲಭ್ಯ ವಾಪಸ್:‌ ಕೇಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2021, 16:11 IST
Last Updated 27 ಆಗಸ್ಟ್ 2021, 16:11 IST
ಅಫ್ಗಾನ್‌ ವಿಮಾನನಿಲ್ದಾಣದ ದೃಶ್ಯ
ಅಫ್ಗಾನ್‌ ವಿಮಾನನಿಲ್ದಾಣದ ದೃಶ್ಯ   

ನವದೆಹಲಿ: ಭಾರತಕ್ಕೆ ಬರುವಅಫ್ಗಾನಿಸ್ತಾನ ನಾಗರಿಕರಿಗೆ ಕೇಂದ್ರ ಸರ್ಕಾರವು ಆರು ತಿಂಗಳ ವೀಸಾ ಸೌಲಭ್ಯ ನೀಡಲಿದೆ. ಬಳಿಕ ಅದನ್ನು ಹಿಂಪಡೆಯಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ವೀಸಾ ಸೌಲಭ್ಯವನ್ನು ದೀರ್ಘಕಾಲ ಮುಂದುವರಿಸುವುದು ಸರಿಯಾದ ಯೋಜನೆಯಲ್ಲ ಎಂದುವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.

ಅಫ್ಗಾನಿಸ್ತಾನದ ತಾಲಿಬಾನ್‌ ವಶವಾದ ಬಳಿಕ ಅಲ್ಲಿನ ನಾಗರಿಕರು ಮತ್ತು ವಿದೇಶಿಗರು ಅಫ್ಗಾನ್‌ನಿಂದಪಲಾಯನ ಮಾಡುತ್ತಿದ್ದಾರೆ. ಇದನ್ನು ಗಮನದಲ್ಲಿರಿಸಿ ಕೇಂದ್ರ ಗೃಹ ಸಚಿವಾಲಯವು, ಸದ್ಯದ ಪರಿಸ್ಥಿತಿಯಲ್ಲಿ ಅಫ್ಗನ್ನರು ಇ-ವೀಸಾ ಬಳಸಿ ಭಾರತಕ್ಕೆ ಬರಬಹುದು ಎಂದು ಪ್ರಕಟಿಸಿತ್ತು.

ವೀಸಾ ಯೋಜನೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ, ʼಆರು ತಿಂಗಳ ವೀಸಾ ಬಳಸಿ ಅವರೆಲ್ಲ (ಅಫ್ಗನ್ನರು) ಸದ್ಯ ಭಾರತಕ್ಕೆ ಬರುತ್ತಿದ್ದಾರೆ. ಅದಾದ ಬಳಿಕ ಅವನ್ನು (ವೀಸಾವನ್ನು) ಹಿಂಪಡೆಯಲಿದ್ದೇವೆ.ಸದ್ಯ ಪರಿಸ್ಥಿತಿಬಿಗಡಾಯಿಸುತ್ತಿದೆ. ವೀಸಾ ಯೋಜನೆಯನ್ನು ದೀರ್ಘಾವಧಿಗೆ ವಿಸ್ತರಿಸುವುದು ಉತ್ತಮ ಆಲೋಚನೆಯಾಗುವುದಿಲ್ಲʼ ಎಂದು ಹೇಳಿದ್ದಾರೆ.

ADVERTISEMENT

ʼನಾವು ಇ-ಎಮರ್ಜೆನ್ಸಿ ವೀಸಾ ವ್ಯವಸ್ಥೆಯಮೊರೆ ಹೋಗುತ್ತಿದ್ದೇವೆ. ಇದು ನಿರ್ದಿಷ್ಟವಾಗಿ ಅಫ್ಗನ್ನರಿಗೆ ಭಾರತಕ್ಕೆ ಪ್ರವೇಶ ನಿರಾಕರಿಸುವಂತಹ ದುರದೃಷ್ಟಕರ ಘಟನೆಗಳಿಗೆ ಕಾರಣವಾಗುವ ಕೆಲವು ಗೊಂದಲಗಳಿಗೆ ದಾರಿಮಾಡಿಕೊಡಬಹುದು ಎಂದೆನಿಸುತ್ತದೆʼ ಎಂದಿದ್ದಾರೆ.

ಮುಂದುವರಿದು,ಅಫ್ಗಾನಿಸ್ತಾನದಲ್ಲಿನ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಈನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿರುವ ಬಾಗ್ಚಿ, ಭಾರತದ ವೀಸಾದೊಂದಿಗೆ ಅಫ್ಗಾನಿಸ್ತಾನ ಪಾಸ್‌ಪೋರ್ಟ್‌ಗಳಿದ್ದನಮ್ಮ ಅರೆಗುತ್ತಿಗೆ ಏಜೆನ್ಸಿಯೊಂದರ ಮೇಲೆ ದಾಳಿ ನಡೆದಿದೆ ಎಂದು ವರದಿಯಾಗಿರುವುದಾಗಿಯೂತಿಳಿಸಿದ್ದಾರೆ.

1,000 ವೀಸಾಗಳು ಕಳ್ಳತನವಾಗಿರುವ ಬಗ್ಗೆ ವರದಿಯಾದ ಬಳಿಕ, ಅಫ್ಗಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಆಗಸ್ಟ್‌ 12 ಮತ್ತು 14ರ ನಡುವೆ ವಿತರಿಸಿದ್ದ11,000ಕ್ಕೂ ಹೆಚ್ಚು ವೀಸಾಗಳನ್ನು ರದ್ದುಗೊಳಿಸಲಾಗಿದೆ. ಇದರ ಬೆನ್ನಲ್ಲೇ ಭಾರತ ಸರ್ಕಾರ ಇ-ವೀಸಾ ಆರಂಭಿಸಿದೆ.

ಕಳವಾಗಿರುವ ವೀಸಾಗಳು ದುರ್ಬಳಕೆಯಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದರು.

ಅಫ್ಗಾನಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿ ಸದ್ಯ ಅತಂತ್ರವಾಗಿದೆ. ತಾಲಿಬಾನ್‌ ಸಂಘಟನೆ ಅಫ್ಗಾನ್‌ ಮೇಲೆ ಹಿಡಿತ ಸಾಧಿಸಿದ ಬಳಿಕ, ಅಲ್ಲಿನ ಅಧ್ಯಕ್ಷ ಅಶ್ರಫ್‌ ಘನಿ ದೇಶದಿಂದ ಪಲಾಯನ ಮಾಡಿದ್ದಾರೆ. ಆತಂಕಕ್ಕೊಳಗಾಗಿರುವ ಅಲ್ಲಿನ ನಾಗರಿಕರು ಮತ್ತು ವಿದೇಶಿ ಪ್ರಜೆಗಳೂ ಅಫ್ಗಾನ್ತೊರೆಯಲು ಹರಸಾಹಸ ಮಾಡುತ್ತಿದ್ದಾರೆ. ಈ ನಡುವೆಯೇ ಆಗಸ್ಟ್‌26ರಂದು ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಬಾಂಬ್‌ ದಾಳಿ ನಡೆದಿರುವುದು ಪರಿಸ್ಥಿತಿಯನ್ನು ಮತ್ತಷ್ಟುಹದಗೆಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.