ADVERTISEMENT

ಉದ್ಧವ್‌ ಠಾಕ್ರೆಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವ ನೈತಿಕತೆ ಇಲ್ಲ: ಅಠವಾಲೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 11:21 IST
Last Updated 6 ಏಪ್ರಿಲ್ 2021, 11:21 IST
ಕೇಂದ್ರ ಸಚಿವ ರಾಮದಾಸ್‌ ಅಠವಾಲೆ
ಕೇಂದ್ರ ಸಚಿವ ರಾಮದಾಸ್‌ ಅಠವಾಲೆ   

ಮುಂಬೈ:ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಮುಂದುವರಿಯುವ ನೈತಿಕತೆಯನ್ನು ಉದ್ಧವ್‌ ಠಾಕ್ರೆ ಕಳೆದುಕೊಂಡಿದ್ದಾರೆ. ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ರಾಮದಾಸ್‌ ಅಠವಾಲೆ ಆಗ್ರಹಿಸಿದ್ದಾರೆ.

ʼಅನಿಲ್‌ ದೇಶಮುಖ್‌ ಕೆಳಗಿಳಿದಿದ್ದಾರೆ. ಆದರೆ, ಅವರು ಇದ್ದಕ್ಕಿಂತ ಮೊದಲೇ ಕೆಳಗಿಳಿಯಬೇಕಿತ್ತು. ಇದು ಮಾತ್ರವಲ್ಲ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೂ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ತಕ್ಷಣವೇ ರಾಜೀನಾಮೆ ನೀಡಬೇಕುʼ ಎಂದು ಒತ್ತಾಯಿಸಿದ್ದಾರೆ.

ಮುಂಬೈನಲ್ಲಿರುವ ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಂದ ಪ್ರತಿ ತಿಂಗಳು ₹ 100 ಕೋಟಿ ವಸೂಲಿ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ದೇಶಮುಖ್‌ ಸೂಚಿಸಿದ್ದರು ಎಂದು ಹಿರಿಯ ಐಪಿಎಸ್‌ ಅಧಿಕಾರಿ ಮತ್ತು ಮುಂಬೈನ ಮಾಜಿ ಪೊಲೀಸ್‌ ಕಮಿಷನರ್‌ ಪರಮ್‌ ಬೀರ್‌ ಸಿಂಗ್‌ ಆರೋಪಿಸಿದ್ದರು.

ADVERTISEMENT

ಈ ಸಂಬಂಧ ತನಿಖೆ ನಡೆಸುವಂತೆ ಸಿಬಿಐಗೆ ಬಾಂಬೆ ಹೈಕೋರ್ಟ್‌ ಆದೇಶ ನೀಡಿದ ಬಳಿಕ, ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶಮುಖ್‌ ಸೋಮವಾರ ತಮ್ಮ ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿದ್ದರು.

ʼದೇಶ್‌ಮುಖ್‌ ಅವರು ಈ ಮೊದಲೇ ಏಕೆ ರಾಜೀನಾಮೆ ನೀಡಲಿಲ್ಲ ಮತ್ತು ಮಾಜಿ ಪೊಲೀಸ್‌ ಕಮಿಷನರ್‌ ಪರಂ ಬೀರ್‌ ಸಿಂಗ್‌ ಅವರು ಮಾಡಿದ ಆರೋಪಗಳ ಬಗ್ಗೆ ಮುಂಬೈ ಹೈ ಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿದ ನಂತರವೇ ರಾಜೀನಾಮೆ ನೀಡಿದ್ದೇಕೆ? ಎಂದೂ ಅಠವಾಲೆ ಪ್ರಶ್ನಿಸಿದ್ದಾರೆ.

ಮಹಾ ವಿಕಾಸ್‌ ಅಘಾಡಿ ಸರ್ಕಾರವುಕೋವಿಡ್-‌19 ಪರಿಸ್ಥಿತಿಯನ್ನೂಸಮರ್ಥವಾಗಿ ನಿಬಾಯಿಸಿಲ್ಲ ಎಂದು ಟೀಕಿಸಿರುವ ಕೇಂದ್ರ ಸಚಿವ, ಹದಗೆಡುತ್ತಿರುವ ಕೋವಿಡ್-19 ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಪ್ರತಿದಿನ ಏರುತ್ತಿರುವ ಸೋಂಕು ಪ್ರಕರಣಗಳ ಸಂಖ್ಯೆಯ ಪಟ್ಟಿಯಲ್ಲಿಮಹಾರಾಷ್ಟ್ರವು ಪ್ರಥಮ ಸ್ಥಾನದಲ್ಲಿದೆʼ ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.