ADVERTISEMENT

ಬಾಬಾ ಕಾ ದಾಬಾ ನಂತರ ವೈರಲ್‌ ಆಯ್ತ 90 ವರ್ಷದ 'ಕಾಂಜಿ ವಡಾ ಅಂಕಲ್'‌ ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಅಕ್ಟೋಬರ್ 2020, 10:51 IST
Last Updated 12 ಅಕ್ಟೋಬರ್ 2020, 10:51 IST
ಕಾಂಜಿ ವಡಾ ಮಾರುವ ವೃದ್ಧ
ಕಾಂಜಿ ವಡಾ ಮಾರುವ ವೃದ್ಧ   

ಆಗ್ರಾ: ದಕ್ಷಿಣ ದೆಹಲಿಯ ಬಾಬಾ ಕಾ ದಾಬಾ ವಿಡಿಯೊ ವೈರಲ್‌ ಆದ ನಂತರ ಆಗ್ರಾದಲ್ಲಿ ಕಾಂಜಿ ವಡಾ(ರಾಜಸ್ಥಾನ ಮೂಲದ ತಿಂಡಿ) ಮಾರುವ 90 ವರ್ಷದ ವೃದ್ಧರೊಬ್ಬರ ವಿಡಿಯೊ ವೈರಲ್‌ ಆಗಿದೆ. ಆ ಮೂಲಕ ವೃದ್ಧರಿಗೆ ನೆರವಿನ ಮಹಾಪೂರವೇ ಹರಿದು ಬಂದಿದೆ.

ಬಾಬಾ ಕಾ ದಾಬಾದ ವೃದ್ಧ ದಂಪತಿಗಳು ಮನನೊಂದು ಕಣ್ಣೀರು ಹಾಕುತ್ತಿದ್ದ ವಿಡಿಯೊವನ್ನು ಬ್ಲಾಗರ್‌ ಗೌರವ್‌ ವಾಸನ್‌ ಅವರು ಚಿತ್ರಿಕರಿಸಿ ಕಳೆದ ವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೊ ಮತ್ತು ಪೋಸ್ಟ್‌ ರಾತ್ರೋರಾತ್ರಿ ವೈರಲ್‌ ಆಗಿತ್ತು. ಮರುದಿನ ಬಾಬಾ ಕಾ ದಾಬಾಗೆ ಜನಸಮೂಹ ಹರಿದುಬಂದಿದ್ದಲ್ಲದೇ, ಈ ವೃದ್ಧ ದಂಪತಿಗಳಿಗೆ ಸಹಾಯವಾಗಲು ಸೆಲೆಬ್ರಿಟಿಗಳು ಮುಂದೆ ಬಂದಿದ್ದರು. ಆನ್‌ಲೈನ್‌ ಮೂಲಕ ಆಹಾರ ಉತ್ಪನ್ನಗಳನ್ನು ವಿತರಿಸುವ ಜೊಮಾಟೊ ಕಂಪನಿಯು ದಂಪತಿಗಳಿಗೆ ಸಹಾಯ ಹಸ್ತ ಚಾಚಿತ್ತು.

ಈ ಘಟನೆಯ ನಂತರ ಆಗ್ರಾದಲ್ಲಿ ಕಾಂಜಿ ವಡಾ ಮಾರುವ 90 ವರ್ಷದ ವೃದ್ಧರೊಬ್ಬರ ಅಳಲನ್ನು ಚಿತ್ರಿಕರಿಸಿದ ವಿಡಿಯೊವನ್ನು ಫುಡ್‌ ಬ್ಲಾಗರ್‌ ಒಬ್ಬರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

'ಇವರು ನಮ್ಮ ಕಾಂಜಿ ವಡಾವಾಲಾ ಅಂಕಲ್‌, ಸುಮಾರು 40 ವರ್ಷಗಳಿಂದ ಕಾಂಜಿ ವಡಾಗಳನ್ನು ಮಾರಾಟ ಮಾಡುತ್ತಿದ್ದಾರೆ. ಈಗ ಅವರಿಗೆ 90 ವರ್ಷ ವಯಸ್ಸಾಗಿದೆ. ಈ ಸಾಂಕ್ರಾಮಿಕ ರೋಗದಿಂದಾಗಿ ಇವರೀಗ ದಿನದಲ್ಲಿ ಕೇವಲ ₹ 250ರಿಂದ ₹ 300ವರೆಗೆ ಮಾತ್ರ ಸಂಪಾದಿಸುತ್ತಾರೆ' ಎಂದು ಬರೆದುಕೊಂಡಿದ್ದರು.

'ಇವರ ಅಂಗಡಿ ಆಗ್ರಾದ ಕಮಾಲಾ ನಗರದ ಪ್ರೊಫೆಸರ್ಸ್‌ ಕಾಲೋನಿಯಲ್ಲಿನ ಡಿಸೈರ್‌ ಬೇಕರಿ ಬಳಿ ಇದೆ. ನನ್ನಂತೆ ನೀವು ಸಹ ಇಲ್ಲಿಗೆ ಬಂದು ತಿನ್ನಿರಿ. ನಿಮಗೆ ಸಾಧ್ಯವಾದಷ್ಟು ಸಹಾಯ ಮಾಡಿ. ಪ್ರತಿದಿನ ಸಂಜೆ 5:30ರಿಂದ ಇವರ ಅಂಗಡಿ ತೆರೆಯುತ್ತದೆ' ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದರು.

ಫುಡ್‌ ಬ್ಲಾಗರ್‌ ಹಂಚಿಕೊಂಡಿರುವ ವಿಡಿಯೊ ವೈರಲ್‌ ಆಗಿದ್ದು ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಕಾಂಜಿ ವಾಡಾ ಅಂಗಡಿಗೆ ಮೊದಲಿಗಿಂತ ಅಧಿಕವಾಗಿ ಜನರು ಬಂದು ವೃದ್ಧರು ಮಾರುವ ತಿಂಡಿಗಳನ್ನು ಸವೆದು ಸಹಾಯಹಸ್ತ ಚಾಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.