ADVERTISEMENT

ಡಿ.ಪಿಯಲ್ಲಿ ತಿರಂಗ ಹಿಡಿದ ನೆಹರೂ ಚಿತ್ರ; ಕಾಂಗ್ರೆಸ್‌ ವಿರುದ್ಧ ಬಿಜೆಪಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 21:15 IST
Last Updated 3 ಆಗಸ್ಟ್ 2022, 21:15 IST
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ತ್ರಿವರ್ಣಧ್ವಜ ಹಿಡಿದಿರುವ ನೆಹರೂ ಅವರ ಚಿತ್ರ ಬಳಸಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ತ್ರಿವರ್ಣಧ್ವಜ ಹಿಡಿದಿರುವ ನೆಹರೂ ಅವರ ಚಿತ್ರ ಬಳಸಿದ್ದಾರೆ.   

ನವದೆಹಲಿ: ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮೊದಲಾದವರು ಸಾಮಾಜಿಕ ಜಾಲತಾಣಗಳ ತಮ್ಮ ಪ್ರೊಫೈಲ್‌ನಡಿ.ಪಿಯಲ್ಲಿ (ಡಿಸ್‌ಪ್ಲೇ ಪಿಕ್ಚರ್) ತ್ರಿವರ್ಣಧ್ವಜ ಹಿಡಿದಿರುವ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಚಿತ್ರವನ್ನು ಬಳಸಿಕೊಂಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ರಾಹುಲ್ ಗಾಂಧಿ ಅವರು ತಮ್ಮ ಕುಟುಂಬದ ಆಚೆಗೂ ಯೋಚಿಸಲಿ ಎಂದಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತಮ್ಮ ತಮ್ಮ ಚಿತ್ರಗಳನ್ನು ಡಿ.ಪಿಯಲ್ಲಿ ಹಾಕಿಕೊಳ್ಳಲು ಅವಕಾಶ ನೀಡಬೇಕು ಎಂದು ಸಲಹೆ ನೀಡಿದೆ.

ಪ್ರಧಾನಿ ಹಾಗೂ ಹಲವು ಬಿಜೆಪಿ ಮುಖಂಡರು ತಮ್ಮ ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ನಲ್ಲಿ
ತ್ರಿವರ್ಣಧ್ವಜದ ಚಿತ್ರವನ್ನು ಬಳಸಿದ ಬಳಿಕ, ಕಾಂಗ್ರೆಸ್ ಮುಖಂಡರು ತ್ರಿವರ್ಣ ಧ್ವಜ ಹಿಡಿದಿರುವ ನೆಹರೂ ಅವರ ಚಿತ್ರವನ್ನು ಬಳಸಿದ್ದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ‘ಪ್ರತೀ ಮನೆಯಲ್ಲೂ ತ್ರಿವರ್ಣಧ್ವಜ’ ಎಂಬ ಸರ್ಕಾರದ ಕಾರ್ಯಕ್ರಮವು ರಾಜಕೀಯವನ್ನು ಮೀರಿದ್ದು. ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳೂ ಈ ಕಾರ್ಯಕ್ರಮ ಬೆಂಬಲಿಸಬೇಕೇ ವಿನಾ ರಾಜಕೀಯಗೊಳಿಸಬಾರದು’ ಎಂದು ಸಲಹೆ ನೀಡಿದರು.

‘ಎಲ್ಲದರಲ್ಲೂ ವಂಶಾಡಳಿತದ ರಾಜಕೀಯ ಮಾಡಬಾರದು. ಕಾಂಗ್ರೆಸ್ ಮುಖಂಡರು ತಮ್ಮ ಡಿ.ಪಿಯಲ್ಲಿ ದೇಶದ ಮೊದಲ ಪ್ರಧಾನಿ ನೆಹರೂ ಅವರ ಚಿತ್ರ ಬಳಸಿದ್ದಾರೆ. ತ್ರಿವರ್ಣಧ್ವಜವು ಕಡು ಬಡವರನ್ನೂ ಒಳಗೊಂಡಂತೆ ದೇಶದ 135 ಕೋಟಿ ಜನರಿಗೂ ಸೇರಿದ್ದು’ ಎಂದು ಪಾತ್ರಾ ಹೇಳಿದ್ದಾರೆ.

ADVERTISEMENT

‘ಯಾರು ಬೇಕಾದರೂ ತ್ರಿವರ್ಣಧ್ವಜ ಹಿಡಿದ ಚಿತ್ರವನ್ನು ಡಿ.ಪಿಯಲ್ಲಿ ಬಳಸಬಹುದು. ರಾಹುಲ್ ಅವರ ಕುಟುಂಬ ಮೊದಲಿನಿಂದಲೂ ರಾಜಕೀಯದಲ್ಲಿದೆ. ರಾಹುಲ್ ಗಾಂಧಿ ಅವರು ಇತರರಿಗೂ ಅವಕಾಶ ನೀಡ
ಬೇಕು. ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ಚಿತ್ರಗಳನ್ನು ಡಿ.ಪಿಯಲ್ಲಿ ಬಳಸಿಕೊಂಡರೆ ಚೆನ್ನಾಗಿರುತ್ತದೆ ಎಂದು ಪಾತ್ರಾ ಹೇಳಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದರೆ, ಅದು ದೇಶದ ಗೌರವವನ್ನು ಹೆಚ್ಚಿಸುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.