ಬಿಜೆಪಿ, ಕಾಂಗ್ರೆಸ್ ಧ್ವಜಗಳು
ನವದೆಹಲಿ: ಪಕ್ಷ ಸೂಚಿಸಿದರ ಹೆಸರುಗಳನ್ನು ಕೈಬಿಟ್ಟು, ಕೇಂದ್ರ ಸರ್ಕಾರವು 'ಕುಚೇಷ್ಠೆ ಮನಸ್ಥಿತಿಯೊಂದಿಗೆ ಆಟವಾಡುತ್ತಿದೆ' ಎಂದು ಕಾಂಗ್ರೆಸ್ ಶನಿವಾರ ಆಕ್ರೋಶ ವ್ಯಕ್ತಪಡಿಸಿದೆ.
ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಪ್ರತಿಯಾಗಿ, ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶಗಳ ಮೇಲೆ ಭಾರತೀಯ ಸೇನೆ ನಡೆಸಿದ 'ಆಪರೇಷನ್ ಸಿಂಧೂರ' ಕುರಿತು ಮಾಹಿತಿ ನೀಡಲು ಮತ್ತು ಪಾಕಿಸ್ತಾನವು ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸುತ್ತಿದೆ ಎಂಬುದನ್ನು ವಿಶ್ವವೇದಿಕೆಯಲ್ಲಿ ಸಾರಲು ಭಾರತ ಮುಂದಾಗಿದೆ. ಅದರ ಭಾಗವಾಗಿ, ವಿವಿಧ ಪಕ್ಷಗಳ ಏಳು ಸಂಸದರ ನೇತೃತ್ವದ ನಿಯೋಗಗಳನ್ನು ರಚಿಸಿದೆ.
ಸಂಸದರ ನಿಯೋಗಗಳಿಗೆ ಪಕ್ಷ ಸೂಚಿಸದಿದ್ದರೂ, ಶಶಿ ತರೂರ್ ಅವರ ಹೆಸರನ್ನು ಸೇರಿಸಿರುವುದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರವು ತರೂರ್ ಹೆಸರು ಸೇರಿಸಿರುವುದಷ್ಟೇ ಅಲ್ಲ. ಹಿರಿಯ ನಾಯಕ ಸಲ್ಮಾನ್ ಕುರ್ಷಿದ್ ಅವರನ್ನೂ ಸಂಪರ್ಕಿಸಿದೆ. ಆದರೆ, ಅವರು ನಿಯೋಗದ ವಿಚಾರವಾಗಿ ಪಕ್ಷ ತೀರ್ಮಾನ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಸರ್ವಪಕ್ಷಗಳ ನಿಯೋಗವನ್ನು ಕಳುಹಿಸುವ ನಿಟ್ಟಿನಲ್ಲಿ ನಾಲ್ವರು ಸಂಸದರ ಹೆಸರುಗಳನ್ನು ಶಿಫಾರಸ್ಸು ಮಾಡುವಂತೆ ಸರ್ಕಾರ ಕಾಂಗ್ರೆಸ್‌ಗೆ ಕೇಳಿತ್ತು. ಅದರಂತೆ, ಆನಂದ್ ಶರ್ಮಾ, ಗೌರವ್ ಗೊಗಯಿ, ಸಯ್ಯದ್ ನಾಸೀರ್ ಹುಸ್ಸೇನ್ ಮತ್ತು ಅಮರಿಂದರ್ ಸಿಂಗ್ ರಾಜಾ ಅವರ ಹೆಸರುಗಳನ್ನು ಕಾಂಗ್ರೆಸ್ ಸೂಚಿಸಿತ್ತು. ಆದರೆ ಸಂಸದೀಯ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ, ಬಿಜೆಪಿ ಸಂಸದ ರವಿಶಂಕರ ಪ್ರಸಾದ್ ಮತ್ತು ಬೈಜಯಂತ್ ಪಾಂಡಾ, ಕಾಂಗ್ರೆಸ್ ಸಂಸದ ಶಶಿ ತರೂರ್, ಜೆಡಿಯು ಸಂಸದ ಸಂಜಯ್ ಜಾ, ಡಿಎಂಕೆ ಸಂಸದೆ ಕನಿಮೋಳಿ, ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ, ಶಿವಸೇನಾ ಸಂಸದ ಶ್ರೀಕಾಂತ್ ಶಿಂದೆ ಈ ನಿಯೋಗಗಳನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ ಎಂದಿದ್ದಾರೆ.
'ಪಕ್ಷವನ್ನು ಸಂಪರ್ಕಿಸದೆ ನಮ್ಮ ಸಂಸದರ ಹೆಸರುಗಳನ್ನು ನಿಯೋಗದಲ್ಲಿ ಸೇರಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂಸದರನ್ನು ಅಧಿಕೃತ ನಿಯೋಗದಲ್ಲಿ ಕಳುಹಿಸುವಾಗ, ಸಂಸದರೂ ಪಕ್ಷದ ಸಮ್ಮತಿ ಪಡೆಯಬೇಕು' ಎನ್ನುತ್ತಲೇ, 'ಕೇಂದ್ರ ಸರ್ಕಾರವು ನಾರದ ಮುನಿ ರಾಜಕಾರಣ ಮಾಡುತ್ತಿದೆ' ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.
'ನಿಯೋಗ ರಚನೆಯ ಇಡೀ ತಂತ್ರವೇ ದಾರಿತಪ್ಪಿಸುವಂತಹದ್ದು ಮತ್ತು ತೋರಿಕೆಯದ್ದು' ಎಂದು ತಿವಿದಿರುವ ಕಾಂಗ್ರೆಸ್ ನಾಯಕ, ತಮ್ಮ ಪಕ್ಷ ಸೂಚಿಸಿರುವ ಹೆಸರುಗಳನ್ನು ಮರುಪರಿಶೀಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
'ನಾಲ್ಕು ಹೆಸರುಗಳನ್ನು ಕೇಳಲಾಗಿತ್ತು. ಶಿಫಾರಸ್ಸು ಮಾಡಿದ್ದೇವೆ. ಅವುಗಳನ್ನು ಪರಿಗಣಿಸದಿರುವುದು ಸರ್ಕಾರದ ಅಪ್ರಾಮಾಣಿಕತೆಯಾಗಿದೆ. ನಾವು ಸೂಚಿಸಿರುವ ಹೆಸರುಗಳ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಮೊದಲು ಹೆಸರುಗಳನ್ನು ಕೇಳಿ, ನಂತರ ತನ್ನಿಚ್ಛೆಯಂತೆ ಹೆಸರು ಘೋಷಿಸುವುದು ಪ್ರಾಮಾಣಿಕತೆಯಲ್ಲ. ಸರ್ಕಾರ ಆಟವಾಡುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ' ಎಂದು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.