ADVERTISEMENT

ರಾಹುಲ್‌ ಇನ್‌ಸ್ಟಾಗ್ರಾಂ ಖಾತೆ ಮೇಲೂ ಕ್ರಮಕ್ಕೆ ಮಕ್ಕಳ ಹಕ್ಕುಗಳ ಆಯೋಗ ಒತ್ತಾಯ

ಸಂತ್ರಸ್ತೆ ಕುಟುಂಬದವರ ಗುರುತು ಬಹಿರಂಗಪಡಿಸಿದ ಆರೋಪ

ಪಿಟಿಐ
Published 13 ಆಗಸ್ಟ್ 2021, 8:46 IST
Last Updated 13 ಆಗಸ್ಟ್ 2021, 8:46 IST
ಎನ್‌ಸಿಪಿಸಿಆರ್‌
ಎನ್‌ಸಿಪಿಸಿಆರ್‌   

ನವದೆಹಲಿ: ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಕುಟುಂಬದವರ ಗುರುತು ಬಹಿರಂಗಪಡಿಸಿದ ಆರೋಪದಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ಟ್ವಿಟರ್‌ ಖಾತೆ ಅಮಾನತುಗೊಳಿಸಲಾಗಿತ್ತು. ಈಗ ಅವರ ಇನ್‌ಸ್ಟಾಗ್ರಾಂ ಖಾತೆಯ ವಿರುದ್ಧವೂ ಇದೇ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌), ಫೇಸ್‌ಬುಕ್‌ ಅನ್ನು ಒತ್ತಾಯಿಸಿದೆ.

ಈ ಕುರಿತು ‘ಫೇಸ್‌ಬುಕ್‌‘ಗೆ ಪತ್ರ ಬರೆದಿರುವ ಎನ್‌ಸಿಪಿಸಿಆರ್‌, ‘ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ, ಕೊಲೆಯಾಗಿರುವ ಬಾಲಕಿಯ ಕುಟುಂಬದವರ ವಿಡಿಯೊವನ್ನು ರಾಹುಲ್‌ ಗಾಂಧಿ, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ವಿಡಿಯೊದಲ್ಲಿ ಸಂತ್ರಸ್ತೆ ಅಪ್ಪ, ಅಮ್ಮನ ಮುಖ ಸ್ಪಷ್ಟವಾಗಿ ಕಾಣುತ್ತದೆ. ಇದು ಕಾನೂನಿನಲ್ಲಿರುವ ನಿಗದಿತ ನಿಬಂಧನೆಗಳ ಉಲ್ಲಂಘನೆಯಾಗುತ್ತದೆ‘ ಎಂದು ಉಲ್ಲೇಖಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಪಿಸಿಆರ್‌ ಆಗಸ್ಟ್‌ 4 ರಂದು ಟ್ವಿಟರ್‌ಗೆ ಪತ್ರ ಬರೆದು, ರಾಹುಲ್ ಗಾಂಧಿಯವರ ಟ್ವಿಟರ್‌ ಖಾತೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. ಈ ದೂರನ್ನು ಆಧರಿಸಿ, ಟ್ವಿಟರ್‌, ರಾಹುಲ್ ಖಾತೆಯನ್ನು ಬ್ಲಾಕ್‌ ಮಾಡಿತ್ತು. ಈಗ ಇನ್‌ಸ್ಟಾಗ್ರಾಂ ಖಾತೆ ವಿರುದ್ಧವೂ ಇದೇ ಕ್ರಮ ಕೈಗೊಳ್ಳಲು ಒತ್ತಾಯ ಕೇಳಿಬಂದಿದೆ.

ADVERTISEMENT

ರಾಹುಲ್ ಗಾಂಧಿಯವರ ಈ ನಡೆ, ಬಾಲ ನ್ಯಾಯ ಕಾಯ್ದೆ– 2015, ಪೋಕ್ಸೊ ಕಾಯ್ದೆ– 2012 ಮತ್ತು ಭಾರತೀಯ ದಂಡ ಸಂಹಿತೆಯ ನಿಯಮಗಳ ಉಲ್ಲಂಘನೆಯಾಗಿದೆ. ಹಾಗಾಗಿ ರಾಹುಲ್ ಅವರ ಇನ್‌ಸ್ಟಾಗ್ರಾಮ್ ಖಾತೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎನ್‌ಸಿಪಿಸಿಆರ್‌ ಫೇಸ್‌ಬುಕ್‌ ಕಂಪನಿಯನ್ನು ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.