ADVERTISEMENT

ಚೀನಾದಿಂದ ಬಂದ ಆಗ್ರಾ ವ್ಯಕ್ತಿಗೆ ಕೋವಿಡ್ ದೃಢ

ಮಾದರಿ ವೈರಾಣು ಸಂರಚನಾ ವಿಶ್ಲೇಷಣೆಗೆ ರವಾನೆ

ಪಿಟಿಐ
Published 25 ಡಿಸೆಂಬರ್ 2022, 14:06 IST
Last Updated 25 ಡಿಸೆಂಬರ್ 2022, 14:06 IST
.
.   

ಆಗ್ರಾ: ‘ಎರಡು ದಿನಗಳ ಹಿಂದೆಯಷ್ಟೇ ಚೀನಾದಿಂದ ಭಾರತಕ್ಕೆ ಮರಳಿರುವ ಆಗ್ರಾದ 40 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್‌– 19 ಇರುವುದು ಪರೀಕ್ಷೆಯಿಂದ ದೃಢಪಟ್ಟಿದ್ದು, ಅವರನ್ನು ಅವರ ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಲಾಗಿದೆ’ ಎಂದು ಇಲ್ಲಿನ ಮುಖ್ಯ ವೈದ್ಯಾಧಿಕಾರಿ ಅರುಣ್ ಶ್ರೀವಾಸ್ತವ ಭಾನುವಾರ ತಿಳಿಸಿದ್ದಾರೆ.

‘ಅವರ ಕೋವಿಡ್ ಮಾದರಿಯನ್ನು ವೈರಾಣು ಸಂರಚನಾ ವಿಶ್ಲೇಷಣೆಗೆ ಕಳುಹಿಸಲಾಗಿದೆ. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ಕುಟುಂಬ ಸದಸ್ಯರು ಮತ್ತು ಇತರರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವಂತೆ ಆರೋಗ್ಯ ಇಲಾಖೆಯ ತಂಡಗಳಿಗೆ ಸೂಚಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.

‘ವ್ಯಕ್ತಿಯು ಡಿ. 23ರಂದು ಚೀನಾದಿಂದ ದೆಹಲಿಯ ಮೂಲಕ ಆಗ್ರಾಕ್ಕೆ ಹಿಂತಿರುಗಿದ್ದು, ಬಳಿಕ ಖಾಸಗಿ ಪ್ರಯೋಗಾಲಯದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ವರದಿಯಲ್ಲಿ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿದೆ’ ಎಂದು ಅರುಣ್ ಮಾಹಿತಿ ನೀಡಿದ್ದಾರೆ.

ADVERTISEMENT

ನವೆಂಬರ್ 25ರ ನಂತರ ಆಗ್ರಾದಲ್ಲಿ ಪತ್ತೆಯಾದ ಮೊದಲ ಕೋವಿಡ್ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.