ADVERTISEMENT

ಭಾರತದ ವುಹಾನ್‌ ಆಗಲಿದೆ ಆಗ್ರಾ: ಮೇಯರ್ ನವೀನ್ ಜೈನ್

ಯೋಗಿ ಆದಿತ್ಯನಾಥ್‌ಗೆ ಕಟುವಾಗಿ ಪತ್ರ ಬರೆದ ಬಿಜೆಪಿ ಮುಖಂಡ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 19:45 IST
Last Updated 26 ಏಪ್ರಿಲ್ 2020, 19:45 IST
ಆಗ್ರಾದಲ್ಲಿ ಲಾಕ್ ಡೌನ್ ಸಂದರ್ಭ ಪೊಲೀಸರ ಬಿಗಿ ಭದ್ರತೆ
ಆಗ್ರಾದಲ್ಲಿ ಲಾಕ್ ಡೌನ್ ಸಂದರ್ಭ ಪೊಲೀಸರ ಬಿಗಿ ಭದ್ರತೆ   

ಲಖನೌ: ‘ಉತ್ತರ ಪ್ರದೇಶ ಸರ್ಕಾರ ಸೋಂಕು ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಆಗ್ರಾ ಇನ್ನೊಂದು ವುಹಾನ್‌ ಆಗುವುದರಲ್ಲಿ ಅನುಮಾನವಿಲ್ಲ’ ಎಂದು ಬಿಜೆಪಿ ಮುಖಂಡ ಮತ್ತು ಮೇಯರ್‌ ನವೀನ್‌ ಜೈನ್‌ ಎಚ್ಚರಿಸಿದ್ದಾರೆ.

ಈ ಸಂಬಂಧ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಪತ್ರ ಬರೆದಿರುವ ಅವರು, ‘ಆಗ್ರಾನಿವಾಸಿಗಳು ಬಿಜೆಪಿ ನಾಯಕರನ್ನು ಶಪಿಸುತ್ತಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ವರ್ಚಸ್ಸಿಗೆ ತೀವ್ರ ಹೊಡೆತ ಬಿದ್ದಿದೆ’ ಎಂದಿದ್ದಾರೆ.

‘ಕ್ವಾರಂಟೈನ್‌ ಕೇಂದ್ರದಲ್ಲಿರುವಜನರ ತಪಾಸಣೆ ಸೂಕ್ತವಾಗಿ ನಡೆಯುತ್ತಿಲ್ಲ. ಮೂತ್ರಪಿಂಡ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ತಮ್ಮ ಚಿಕಿತ್ಸೆಗೆ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಸಾಯುತ್ತಿದ್ದಾರೆ. ಜಿಲ್ಲೆಯ ಹಿರಿಯ ಅಧಿಕಾರಿಗಳು ಮನೆಯಿಂದ ಹೊರಗೇ ಬರುತ್ತಿಲ್ಲ. ಛಾಯಾಚಿತ್ರ ತೆಗೆಸಿಕೊಳ್ಳಲು ಮಾತ್ರವೇ ಕೆಲವು ನಿಮಿಷಗಳ ಕಾಲ ಬಂದು ಹೋಗುತ್ತಾರೆ’ ಎಂದು ದೂರಿದ್ದಾರೆ.

ADVERTISEMENT

‘ಸರ್ಕಾರ ಈ ಪತ್ರವನ್ನು ಗಮನಿಸಿದ್ದು,ಈ ಸಂಬಂಧ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಉತ್ತರ ಪ್ರದೇಶದ ಸಚಿವರೊಬ್ಬರು ತಿಳಿಸಿದ್ದಾರೆ.ಸೋಂಕು ನಿಯಂತ್ರಣದಲ್ಲಿ ಕೇರಳದ ಕಾಸರಗೋಡು ಮತ್ತು ರಾಜಸ್ಥಾನದಭಿಲ್ವಾಡಾ ಮಾದರಿಗೆ ಆಗ್ರಾವನ್ನು ಹೋಲಿಸಿದ್ದ ಸರ್ಕಾರಕ್ಕೆ ಇದರಿಂದ ಮುಜುಗರ ಉಂಟಾಗಿದೆ.

ರಾಜ್ಯದಲ್ಲಿ 1,850 ಸೋಂಕಿತರಿದ್ದು, ಅದರಲ್ಲಿ ಶೇ 20 ರಷ್ಟು ಪ್ರಕರಣ ಆಗ್ರಾದಲ್ಲಿಯೇ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.