ನವದೆಹಲಿ: ಕೃಷಿ ಹಾಗೂ ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿಗೆ ಇನ್ನಷ್ಟು ಉತ್ತೇಜನ ನೀಡಲು ‘ಪ್ರಧಾನಮಂತ್ರಿ ಧನ–ಧಾನ್ಯ ಯೋಜನೆ’ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಈ ಯೋಜನೆಯು ದೇಶದ 100 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿದೆ. ಈ ಯೋಜನೆಯ ಅವಧಿ ಆರು ವರ್ಷಗಳು. ವಾರ್ಷಿಕ ₹24 ಸಾವಿರ ಕೋಟಿ ವೆಚ್ಚ ಒಳಗೊಂಡಿದೆ. ಈ ಯೋಜನೆಯಿಂದ 1.7 ಕೋಟಿ ರೈತರಿಗೆ ಅನುಕೂಲ ವಾಗಲಿದೆ. ಈ ಯೋಜನೆ ಬಗ್ಗೆ 2025–26ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು.
ಕೃಷಿ ಉತ್ಪಾದಕತೆ ಹೆಚ್ಚಳ, ಬೆಳೆಗಳಲ್ಲಿ ವೈವಿಧ್ಯ, ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆಗೆ ಉತ್ತೇಜನ, ಪಂಚಾಯಿತಿ ಮತ್ತು ಬ್ಲಾಕ್ ಮಟ್ಟದಲ್ಲಿ ಕೊಯ್ಲಿನ ನಂತರದ ಸಂಗ್ರಹಣೆ ಹೆಚ್ಚಿಸುವುದು, ನೀರಾವರಿ ಸೌಲಭ್ಯಗಳ ಸುಧಾರಣೆ, ದೀರ್ಘಾವಧಿ ಮತ್ತು ಅಲ್ಪಾವಧಿ ಸಾಲದ ಲಭ್ಯತೆಯನ್ನು ಸುಗಮಗೊಳಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುವುದು. ಜಿಲ್ಲಾ ಧನ ಧಾನ್ಯ ಸಮಿತಿಯು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಯೋಜನೆಗೆ ಅಂತಿಮ ರೂಪ ನೀಡುತ್ತದೆ. ಈ ಸಮಿತಿಯಲ್ಲಿ ಪ್ರಗತಿಪರ ರೈತರು ಇರುತ್ತಾರೆ
ಎಂದರು.
ಹೂಡಿಕೆ ವಿನಾಯಿತಿಗೆ ಅಸ್ತು
ದೇಶದಲ್ಲಿ ನವೀಕರಿಸಬಹು ದಾದ ಇಂಧನ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಇದೀಗ ಎನ್‌ಎಲ್‌ಸಿ ಇಂಡಿಯಾ ಲಿಮಿಟೆಡ್‌ಗೆ ಹೂಡಿಕೆ ವಿನಾಯಿತಿ ನೀಡಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಿಗೆ ಅನ್ವಯವಾಗುವಂತೆ ಸದ್ಯ
ಚಾಲ್ತಿಯಲ್ಲಿರುವ ಹೂಡಿಕೆ ಮಾರ್ಗಸೂಚಿ ಗಳಿಂದ ಈ ಸಂಸ್ಥೆಗೆ ವಿಶೇಷ ವಿನಾಯಿತಿ ನೀಡಲಾಗಿದೆ. ಸಚಿವ ಸಂಪುಟವು ಹೂಡಿಕೆ ವಿನಾಯಿತಿಗೆ ಅನುಮೋದನೆ ನೀಡಿದ್ದರಿಂದಾಗಿ ಸಂಸ್ಥೆಯು ಅಂಗಸಂಸ್ಥೆಯಾದ ಎನ್‌ಎಲ್‌ಸಿ ಇಂಡಿಯಾ ನವೀಕರಿಸ
ಬಹುದಾದ ಇಂಧನ ಲಿಮಿಟೆಡ್ ₹7,000 ಕೋಟಿ ಹೂಡಿಕೆ ಮಾಡಬಹುದು ಎಂದರು.
11 ಇಲಾಖೆಗಳ 36 ಯೋಜನೆಗಳು
ಈ ಯೋಜನೆಯು 11 ಇಲಾಖೆಗಳಲ್ಲಿ ಅಸ್ತಿತ್ವದಲ್ಲಿರುವ 36 ಯೋಜನೆಗಳನ್ನು ಒಟ್ಟು ಗೂಡಿಸುತ್ತದೆ. ಇದನ್ನು ರಾಜ್ಯ ಯೋಜನೆಗಳು ಮತ್ತು ಖಾಸಗಿ ವಲಯಗಳ ಜತೆಗೆ ಸ್ಥಳೀಯ ಸಹಭಾಗಿತ್ವದ ಮೂಲಕ ಜಾರಿಗೆ ತರಲಾಗುತ್ತದೆ. ಕಡಿಮೆ ಉತ್ಪಾದಕತೆ, ಕಡಿಮೆ ಬೆಳೆ ಮತ್ತು ಕಡಿಮೆ ಸಾಲ ವಿತರಣೆಯ ಮೂರು ಅಂಶಗಳ ಆಧಾರದಲ್ಲಿ 100 ಜಿಲ್ಲೆಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಜಿಲ್ಲೆಗಳ ಸಂಖ್ಯೆಯು ನಿವ್ವಳ ಬೆಳೆ ಪ್ರದೇಶ ಮತ್ತು ಹಿಡುವಳಿಗಳ ಪಾಲನ್ನು ಆಧರಿಸಿರುತ್ತದೆ. ಆದಾಗ್ಯೂ, ಪ್ರತಿ ರಾಜ್ಯದಿಂದ ಕನಿಷ್ಠ 1 ಜಿಲ್ಲೆಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.
ಎನ್‌ಟಿಪಿಸಿ ₹20 ಸಾವಿರ ಕೋಟಿ ಹೂಡಿಕೆ
ನವೀಕರಿಸಬಹುದಾದ ಇಂಧನದ ಉತ್ಪಾದನೆ ವೇಗಗೊಳಿಸಲು ಕೇಂದ್ರ ಸರ್ಕಾರವು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ (ಎನ್‌ಟಿಪಿಸಿ) ಆರ್ಥಿಕ ಸ್ವಾಯತ್ತೆ ಹೆಚ್ಚಿಸಿದೆ.
ಸರ್ಕಾರಿ ಸ್ವಾಮ್ಯದ ಎನ್‌ಟಿಪಿಸಿ ಈಗ ತನ್ನ ನವೀಕರಿಸಬಹುದಾದ ಇಂಧನ ಅಂಗಸಂಸ್ಥೆ ಗಳಲ್ಲಿ ₹20,000 ಕೋಟಿಗಳವರೆಗೆ ಹೂಡಿಕೆ ಮಾಡಬಹುದು. ಈ ಹಿಂದೆ ಈ ಮಿತಿ ₹7,500 ಕೋಟಿ ಆಗಿತ್ತು.
ಶುಭಾಂಶುವಿಗೆ ಅಭಿನಂದನೆ– ನಿರ್ಣಯ
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳ ಐತಿಹಾಸಿಕ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಸಚಿವ ಸಂಪುಟ ಅಭಿನಂದಿಸಿತು.
ಅವರ ಸಾಧನೆಯು ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು ಎಂದು ಪ್ರತಿಪಾದಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.