ಕ್ರಿಶ್ಚಿಯನ್ ಮೈಕೆಲ್
ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಪ್ರಮುಖ ಆರೋಪಿ ಕ್ರಿಸ್ಟಿಯನ್ ಮೈಕೆಲ್ ಜೇಮ್ಸ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ಕುರಿತ ತೀರ್ಪನ್ನು ದೆಹಲಿ ಹೈಕೋರ್ಟ್ ಇಂದು (ಮಂಗಳವಾರ) ಪ್ರಕಟಿಸಲಿದೆ.
ಇ.ಡಿ ದಾಖಲಿಸಿದ್ದ ಪ್ರಕರಣದಲ್ಲಿ ಕಕ್ಷಿದಾರರ ವಾದ ಆಲಿಸಿದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಫೆ. 28 ರಂದು ತೀರ್ಪು ಕಾಯ್ದಿರಿಸಿದ್ದರು. ಇಂದು ಸಂಜೆ 4 ಗಂಟೆಗೆ ಅವರು ತೀರ್ಪು ಪ್ರಕಟಿಸಲಿದ್ದಾರೆ.
ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿ ಫೆ.18ರಂದು ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು.
ಮೈಕೆಲ್ ಅವರ ಜಾಮೀನು ಅರ್ಜಿಗೆ ಇ.ಡಿ ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಮೈಕೆಲ್ ಪರ ವಕೀಲರು, ಅವರು(ಮೈಕೆಲ್) ಈಗಾಗಲೇ ಸಾಕಷ್ಟು ಸಮಯವನ್ನು ಜೈಲಿನಲ್ಲಿಯೇ ಕಳೆದಿದ್ದಾರೆ. ಹಣ ಅಕ್ರಮ ವರ್ಗಾವಣೆ ತಡೆ ಕಾನೂನು ಪ್ರಕಾರ ಗರಿಷ್ಠ ಏಳು ವರ್ಷಗಳ ಶಿಕ್ಷೆ ವಿಧಿಸಬಹುದು. ಅವರು 6 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ. ಹಾಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.
ಗಣ್ಯವ್ಯಕ್ತಿಗಳ ಹಾರಾಟಕ್ಕೆಂದು ₹3600 ಕೋಟಿ ವೆಚ್ಚದಲ್ಲಿ ಭಾರತ 2010ರಲ್ಲಿ 12 ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಗರಣದ ಪ್ರಮುಖ ಆರೋಪಿ ಕ್ರಿಶ್ಚಿಯನ್ ಮೈಕೆಲ್ ಅವರನ್ನು 2018ರಲ್ಲಿ ದುಬೈನಿಂದ ಗಡಿಪಾರು ಮಾಡಲಾಗಿತ್ತು. ಬಳಿಕ ಸಿಬಿಐ ಮತ್ತು ಇ.ಡಿ ಅವರನ್ನು ಬಂಧಿಸಿತ್ತು.
ಮಧ್ಯವರ್ತಿಯಾಗಿದ್ದ ಮೈಕೆಲ್ ಅವರು, ಅಗಸ್ಟಾ ವೆಸ್ಟ್‌ಲ್ಯಾಂಡ್‌ನಿಂದ ಸುಮಾರು ₹ 225 ಕೋಟಿ ಪಡೆದಿದ್ದಾರೆ ಎಂದು ಇ.ಡಿ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು.
ವಿವಿಐಪಿ ಹೆಲಿಕಾಪ್ಟರ್‌ಗಳ ಪೂರೈಕೆ ಒಪ್ಪಂದದಿಂದಾಗಿ ದೇಶದ(ಭಾರತ) ಬೊಕ್ಕಸಕ್ಕೆ ಸುಮಾರು ₹2,666 ಕೋಟಿ ನಷ್ಟವಾಗಿದೆ ಎಂದು ಸಿಬಿಐ ತನ್ನ ಆರೋಪಪಟ್ಟಿಯಲ್ಲಿ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.