ADVERTISEMENT

MLC ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ರಾಹುಲ್‌ ಗಾಂಧಿ ಆಪ್ತನ ಪತ್ನಿ

ಪಿಟಿಐ
Published 18 ಡಿಸೆಂಬರ್ 2025, 9:53 IST
Last Updated 18 ಡಿಸೆಂಬರ್ 2025, 9:53 IST
   

ಮುಂಬೈ: ಕಾಂಗ್ರೆಸ್ ನಾಯಕಿ ಪ್ರಜ್ಞಾ ಸಾತವ್ ಅವರು ಮಹಾರಾಷ್ಟ್ರ ವಿಧಾನ ಪರಿಷತ್‌ (ಎಂಎಲ್‌ಸಿ) ಸದಸ್ಯ ಸ್ಥಾನಕ್ಕೆ ಇಂದು (ಗುರುವಾರ) ರಾಜೀನಾಮೆ ನೀಡಿದ್ದು, ಬಿಜೆಪಿಗೆ ಸೇರಿದ್ಡಾರೆ.

ಪ್ರಜ್ಞಾ ಸಾತವ್ ಅವರು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆಪ್ತರಾಗಿದ್ದ ದಿ.ರಾಜೀವ್‌ ಸಾತವ್‌ ಅವರ ಪತ್ನಿ. ರಾಜ್ಯದ (ಮಹಾರಾಷ್ಟ್ರ) ಮರಾಠವಾಡ ಪ್ರದೇಶದ ಹಿಂಗೋಲಿ ಜಿಲ್ಲೆಯವರು. 2021ರಲ್ಲಿ ಅವರು ಮೊದಲ ಬಾರಿಗೆ ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು.

ಪತಿಯ ನಿಧನದ (2021) ನಂತರ, ಪ್ರಜ್ಞಾ ಅವರು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕಳೆದ ವರ್ಷದ ಜುಲೈನಲ್ಲಿ ಅವರನ್ನು ವಿಧಾನ ಪರಿಷತ್‌ಗೆ ಮರುನಾಮಕರಣ ಮಾಡಲಾಗಿತ್ತು. ಅವರ ಅಧಿಕಾರವಧಿ 2030ರಲ್ಲಿ ಕೊನೆಗೊಳ್ಳಬೇಕಿತ್ತು.

ADVERTISEMENT

ವಿಧಾನ ಪರಿಷತ್‌ ಸಭಾಪತಿ ರಾಮ್ ಶಿಂಧೆ ಅವರನ್ನು ಭೇಟಿ ಮಾಡಿ, ಪ್ರಜ್ಞಾ ಅವರು ತಮ್ಮ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬಳಿಕ ಮಹಾರಾಷ್ಟ್ರದ ಆಡಳಿತ ಪಕ್ಷದ ಮುಖ್ಯಸ್ಥ ರವೀಂದ್ರ ಚವಾಣ್ ಮತ್ತು ಕಂದಾಯ ಸಚಿವ ಚಂದ್ರಶೇಖರ್ ಬವಾಂಕುಲೆ ಅವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರಿದ್ದಾರೆ. ಇವರ ಜೊತೆಗೆ, ಸೋಲಾಪುರ ಮಾಜಿ ಶಾಸಕ ದಿಲೀಪ್ ಮಾನೆ ಕೂಡ ಬಿಜೆಪಿಗೆ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಚುನಾವಣೆಗಳ ಮಧ್ಯೆ ಅವರ ಪಕ್ಷದಿಂದ ನಿರ್ಗಮನವು ಕಾಂಗ್ರೆಸ್‌ಗೆ ಹಿನ್ನಡೆ ಎಂದೇ ಪರಿಗಣಿಸಲಾಗುತ್ತಿದೆ. ರಾಜ್ಯದ(ಮಹಾರಾಷ್ಟ್ರ) 29 ಮಹಾನಗರ ಪಾಲಿಕೆಗಳಿಗೆ ಜನವರಿ 15 ರಂದು ಚುನಾವಣೆ ನಡೆಯಲಿದೆ. ಮರುದಿನ ಮತ ಎಣಿಕೆ ಕಾರ್ಯ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.