ADVERTISEMENT

ವಿಮಾನ ದುರಂತ | ಪರಿಹಾರಕ್ಕೆ ಮೃತರ ಕುಟುಂಬದವರ ಹಣಕಾಸು ವಿವರ ಕೇಳಿಲ್ಲ: Air India

ಪಿಟಿಐ
Published 5 ಜುಲೈ 2025, 6:43 IST
Last Updated 5 ಜುಲೈ 2025, 6:43 IST
<div class="paragraphs"><p>ಅಹಮದಾಬಾದ್‌ನಲ್ಲಿ ಪತನಗೊಂಡ ಏರ್‌ ಇಂಡಿಯಾ ವಿಮಾನ AI–171</p></div>

ಅಹಮದಾಬಾದ್‌ನಲ್ಲಿ ಪತನಗೊಂಡ ಏರ್‌ ಇಂಡಿಯಾ ವಿಮಾನ AI–171

   

ಪಿಟಿಐ ಚಿತ್ರ

ನವದೆಹಲಿ: ಅಹಮದಾಬಾದ್‌ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬವರಿಗೆ ಪರಿಹಾರ ವಿತರಿಸುವುದಕ್ಕೆ ಸಂಬಂಧಿಸಿದಂತೆ, ಕುಟುಂಬ ಸದಸ್ಯರು ಹಣಕಾಸಿನ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ ಎಂಬ ಆರೋಪವನ್ನು ಏರ್‌ ಇಂಡಿಯಾ ನಿರಾಕರಿಸಿದೆ.

ADVERTISEMENT

ಅಹಮದಾಬಾದ್‌ನಿಂದ ಲಂಡನ್‌ನತ್ತ ಜೂನ್‌ 12ರ ಮಧ್ಯಾಹ್ನ ಪ್ರಯಾಣ ಆರಂಭಿಸಿದ್ದ ಏರ್‌ ಇಂಡಿಯಾ ವಿಮಾನ AI–171, ಹಾರಾಟ ಆರಂಭಿಸಿದ ಕೆಲವೇ ಸೆಕೆಂಡುಗಳಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ 242 ಪ್ರಯಾಣಿಕರ ಪೈಕಿ, 241 ಮಂದಿ ಮೃತಪಟ್ಟಿದ್ದರು.

ದುರಂತದ ಬೆನ್ನಲ್ಲೇ, ಟಾಟಾ ಸಮೂಹವು ಮೃತರ ಕುಟುಂಬಗಳಿಗೆ ತಲಾ ₹ 1 ಕೋಟಿ ಪರಿಹಾರ ಘೋಷಿಸಿತ್ತು.

ಮೃತಪಟ್ಟವರಲ್ಲಿ ಮೂರನೇ ಎರಡರಷ್ಟು ಕುಟುಂಬಗಳಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ ಎಂದು ಏರ್‌ ಇಂಡಿಯಾ ಪಿಟಿಐಗೆ ತಿಳಿಸಿದೆ.

ಆದಾಗ್ಯೂ, ಮೃತರ ಮೇಲಿನ ಅವಲಂಬನೆಯ ಬಗ್ಗೆ ತಿಳಿಸುವ ಹಣಕಾಸಿನ ವಿವರಗಳನ್ನು ನೀಡುವಂತೆ ಕುಟುಂಬದವರನ್ನು ಒತ್ತಾಯಿಸಲಾಗುತ್ತಿದೆ. ಆ ಮಾಹಿತಿಯನ್ನು ಬಳಸಿಕೊಂಡು ಪರಿಹಾರ ಮೊತ್ತ ಕಡಿತಗೊಳಿಸಲು ವಿಮಾನಯಾನ ಸಂಸ್ಥೆ ಪ್ರ‌ಯತ್ನಿಸುತ್ತಿದೆ ಎಂದು ಕೆಲವು ಕುಟುಂಬಗಳು ಆರೋಪಿಸಿವೆ ಎನ್ನಲಾಗಿದೆ.

ಇದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿರುವ ಏರ್‌ ಇಂಡಿಯಾ, 'ಇವು ಖಚಿತವಲ್ಲದ ಹಾಗೂ ಆಧಾರರಹಿತ ಆರೋಪಗಳು' ಎಂದು ಸ್ಪಷ್ಟಪಡಿಸಿದೆ.

‌ಸಂತ್ರಸ್ತ ಕುಟುಂಬದವರಿಗೆ ನೆರವಾಗುವುದು ಮತ್ತು ಅವರ ಕಲ್ಯಾಣವು ತನ್ನ ಆದ್ಯತೆಯಾಗಿದೆ ಎಂದು ಒತ್ತಿಹೇಳಿರುವ ವಿಮಾನಯಾನ ಸಂಸ್ಥೆ, ಇಂತಹ ಆರೋಪಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.