ADVERTISEMENT

Ahmedabad Plane Crash: 'ಎಂಜಿನ್‌ ಶಕ್ತಿ ಕಳೆದುಕೊಂಡಿದ್ದೇ ದುರಂತಕ್ಕೆ ಕಾರಣ'

ಪಿಟಿಐ
Published 14 ಜೂನ್ 2025, 16:17 IST
Last Updated 14 ಜೂನ್ 2025, 16:17 IST
<div class="paragraphs"><p>ರಾಯಿಟರ್ಸ್ ಚಿತ್ರ</p></div>

ರಾಯಿಟರ್ಸ್ ಚಿತ್ರ

   

ಕೋಲ್ಕತ್ತ: ‘ಟೇಕಾಫ್‌ ನಂತರದ ನಿರ್ಣಾಯಕ ಹಂತದಲ್ಲಿ ಏರ್‌ ಇಂಡಿಯಾ ಬೋಯಿಂಗ್‌ ಡ್ರೀಮ್‌ಲೈನರ್‌ 787–8 ವಿಮಾನದ ಎಂಜಿನ್‌ ಶಕ್ತಿ ಕಳೆದುಕೊಂಡಿದ್ದೇ ದುರಂತಕ್ಕೆ ಕಾರಣ’ ಎಂದು ಮಾಜಿ ಏರ್‌ ಚೀಫ್‌ ಮಾರ್ಷಲ್‌ ಅರೂಪ್‌ ರಾಹಾ ಅಭಿಪ್ರಾಯಪಟ್ಟಿದ್ದಾರೆ. 

‘ವಿಮಾನದ ಇಂಧನ ಮಾಲಿನ್ಯ, ಸಾಫ್ಟ್‌ವೇರ್‌ ದೋಷ, ವಿಮಾನದ ನಿಯಂತ್ರಣ ವ್ಯವಸ್ಥೆಯಲ್ಲಿನ ತಾಂತ್ರಿಕ ಲೋಪಗಳು ಸೇರಿ ಹಲವು ಸಂಗತಿಗಳು ದುರಂತಕ್ಕೆ ಕಾರಣವಾಗಬಲ್ಲವು’ ಎಂದ ಅವರು, ‘ವಿಮಾನವು ನೆಲದಿಂದ ಆಗಸಕ್ಕೇರುವ ನಿರ್ಣಾಯಕ ಹಂತದಲ್ಲಿ ಎಂಜಿನ್‌ ಶಕ್ತಿ ಕಳೆದುಕೊಂಡಿತು. ಅದರ ಮರುಸ್ಥಾಪನೆಗೆ ಸಮಯವೇ ಇರಲಿಲ್ಲ. ಕೆಲವೇ ಸೆಕೆಂಡ್‌ಗಳಲ್ಲಿ ವಿಮಾನ ಪತನಗೊಂಡಿತು’ ಎಂದರು.   

ADVERTISEMENT

ವಿಮಾನ ಪತನಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ವಿಧ್ವಂಸಕ ಕೃತ್ಯದ ಆರೋಪವನ್ನು ರಾಹಾ ಅಲ್ಲಗಳೆದರು. ‘ಇಂತಹ ಸುದ್ದಿಗಳನ್ನು ಹರಡಬೇಡಿ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತನಿಖೆ ಪೂರ್ಣಗೊಳಿಸುವ ತನಕ ಕಾಯಿರಿ’ ಎಂದು ಮನವಿ ಮಾಡಿದರು. 

ಹಕ್ಕಿ ಡಿಕ್ಕಿ ಹೊಡೆದಿರಬಹುದು ಎಂಬುದನ್ನೂ ಅಲ್ಲಗಳೆದ ಅವರು, ‘ಇದು ಹೃದಯವಿದ್ರಾವಕ ಘಟನೆ. ದೊಡ್ಡ ದುರಂತ. ಈಗಲೇ ಎಲ್ಲಿ ಲೋಪವಾಗಿದೆ ಎನ್ನುವುದನ್ನು ಹೇಳುವುದು ಕಷ್ಟ. ಸಾಮಾನ್ಯವಾಗಿ  ಬೋಯಿಂಗ್‌ 787–8 ಡ್ರೀಮ್‌ಲೈನರ್‌ ಸರಣಿಯ ವಿಮಾನಗಳ ಎರಡೂ ಎಂಜಿನ್‌ಗಳ ಶಕ್ತಿ ಏಕಕಾಲದಲ್ಲಿ ಕಡಿಮೆಯಾಗುವುದು ಅಪರೂಪದಲ್ಲೇ ಅಪರೂಪದ ಸಂಗತಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.