ADVERTISEMENT

Ahmedabad Plane Crash | ಇಂಧನ ಪೂರೈಕೆ ಸ್ಥಗಿತವೇ ದುರಂತಕ್ಕೆ ಕಾರಣ: ವರದಿ

ಪಿಟಿಐ
Published 12 ಜುಲೈ 2025, 3:15 IST
Last Updated 12 ಜುಲೈ 2025, 3:15 IST
   

‌ನವದೆಹಲಿ: ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ಪತನಗೊಳ್ಳುವುದಕ್ಕೂ ಮುನ್ನ ಅದರ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಸುವ ಸ್ವಿಚ್‌ಗಳು ‘ಕಟ್‌ ಆಫ್ ಸ್ಥಿತಿಯಲ್ಲಿ ಇದ್ದವು’ ಮತ್ತು ಇದರಿಂದ ಪೈಲಟ್‌ಗಳು ಗೊಂದಲಕ್ಕೀಡಾಗಿದ್ದರು ಎಂಬ ವಿಷಯ ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ತನಿಖೆಯಿಂದ ಗೊತ್ತಾಗಿದೆ.

ಈ ಲೋಪದಿಂದಾಗಿ ವಿಮಾನವು ಟೇಕ್‌–ಆಫ್‌ ಆದ ಕೆಲವೇ ಸೆಕೆಂಡ್‌ಗಳಲ್ಲಿ ಕೆಳಗಿಳಿಯಲು ಆರಂಭಿಸಿ, ದುರಂತ ಸಂಭವಿಸಿತು ಎಂದು ಎಎಐಬಿ ಪ್ರಾಥಮಿಕ ತನಿಖಾ ವರದಿ ತಿಳಿಸಿದೆ. 

ಬ್ರಿಟನ್‌ನ ವಾಯು ಅಪಘಾತ ತನಿಖಾ ಶಾಖೆ ಮತ್ತು ಅಮೆರಿಕ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ನೆರವಿನಿಂದ ಎಎಐಬಿ ಈ ತನಿಖೆಯನ್ನು ನಡೆಸಿದೆ. ದುರಂತದ ಕುರಿತು 15 ಪುಟಗಳ ವರದಿಯನ್ನು ಅದು ಬಿಡುಗಡೆಗೊಳಿಸಿದ್ದು, ಕೆಲವು ಆಘಾತಕಾರಿ ಮಾಹಿತಿಗಳು ತಿಳಿದುಬಂದಿವೆ.  

ADVERTISEMENT

ಜೂನ್‌ 12ರಂದು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳಲು ಏರ್‌ ಇಂಡಿಯಾ ವಿಮಾನ (ಬೋಯಿಂಗ್‌ 787 ಡ್ರೀಮ್‌ಲೈನರ್) ಟೇಕ್‌–ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಮೇಘಾನಿನಗರದ ವೈದ್ಯಕೀಯ ಕಾಲೇಜಿನ ಸಂಕೀರ್ಣದಲ್ಲಿದ್ದ ಕಟ್ಟಡಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ 241 ಪ್ರಯಾಣಿಕರು, ಸಿಬ್ಬಂದಿ ಹಾಗೂ ಘಟನಾ ಸ್ಥಳದಲ್ಲಿದ್ದ 19 ಮಂದಿ ಮೃತಪಟ್ಟಿದ್ದರು. ಪ್ರಯಾಣಿಕರೊಬ್ಬರು ಅಪಾಯದಿಂದ ಪಾರಾಗಿದ್ದರು.

ವರದಿಯ ಪ್ರಮುಖಾಂಶಗಳು:

* ವಿಮಾನ ಟೇಕ್‌–ಆಫ್‌ ಆದ ಮೂರೇ ಸೆಕೆಂಡ್‌ಗಳಲ್ಲಿ ಎರಡೂ ಎಂಜಿನ್‌ಗಳ ಇಂಧನ ಪೂರೈಕೆ ಸ್ವಿಚ್‌ಗಳು, ಇದ್ದಕ್ಕಿದ್ದಂತೆ ‘ರನ್‌’ ಮೋಡ್‌ನಿಂದ ‘ಕಟ್‌ಆಫ್‌’ ಮೋಡ್‌ಗೆ ಬದಲಾದವು. ಇದು ಕೇವಲ ಒಂದು ಸೆಕೆಂಡ್‌ನಲ್ಲಿ ಸಂಭವಿಸಿದೆ. ಎಂಜಿನ್‌ಗಳಿಗೆ ಇಂಧನ ಪೂರೈಕೆ ನಿಂತಿದ್ದರಿಂದ ಅವು ಕಾರ್ಯವನ್ನು ಸ್ಥಗಿತಗೊಳಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ 

‌* ಎಂಜಿನ್‌ಗಳನ್ನು ಪುನಃ ಆನ್‌ ಮಾಡಲು ಪೈಲಟ್‌ಗಳು ಪ್ರಯತ್ನಿಸಿದ್ದಾರೆ. ಆಗ ಎಂಜಿನ್‌ 1ರಲ್ಲಿ ಭಾಗಶಃ ಚೇತರಿಕೆ ಕಂಡುಬಂದಿದೆ. ಆದರೆ ಎಂಜಿನ್‌ 2ರಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಇದರಿಂದ ಈ ಪ್ರಯತ್ನ ವಿಫಲವಾಗಿದೆ

* ಈ ತುರ್ತು ಪರಿಸ್ಥಿತಿಯ ಬಗ್ಗೆ ತಿಳಿಯುತ್ತಿದ್ದಂತೆ ಪೈಲಟ್‌ಗಳು ವಿಮಾನದ ಸ್ವಯಂಚಾಲಿತ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಯತ್ನಿಸಿದ್ದಾರೆ. ‘ರ್‍ಯಾಮ್‌ ಏರ್‌ ಟರ್ಬೈನ್‌’ (ಆರ್‌ಎಟಿ), ತುರ್ತು ಫ್ಯಾನ್‌ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿದರೂ ದುರಂತ ತಪ್ಪಿಸುವಲ್ಲಿ ವಿಫಲರಾಗಿದ್ದಾರೆ

* ಸಾಮಾನ್ಯವಾಗಿ ವಿಮಾನದಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾದಾಗ ‘ಆರ್‌ಎಟಿ’ ಅನ್ನು ಸಕ್ರಿಯಗೊಳಿಸಲಾಗುತ್ತದೆ. ಅಂದರೆ, ಎಂಜಿನ್‌ ಸ್ಥಗಿತಗೊಂಡಿದ್ದು ವಿಮಾನದಲ್ಲಿ ವಿದ್ಯುತ್‌ ಪೂರೈಕೆ ಮೇಲೂ ಪರಿಣಾಮ ಬೀರಿತ್ತು ಎಂಬುದು ಗೊತ್ತಾಗುತ್ತದೆ

* ತುರ್ತುಸ್ಥಿತಿ ಅರಿತ ಪೈಲಟ್‌ ಒಬ್ಬರು ‘ಮೇ ಡೇ, ಮೇ ಡೇ, ಮೇ ಡೇ’ ಎಂದು ಸಹಾಯಕ್ಕೆ ನೆರವು ಯಾಚಿಸಿದರು. ಆದರೆ ವಾಯು ಸಂಚಾರ ನಿಯಂತ್ರಕರು ಏನಾಗಿದೆ ಎಂಬುದನ್ನು ತಿಳಿದುಕೊಳ್ಳುವಷ್ಟರಲ್ಲಿ ವಿಮಾನವು ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಅಪ್ಪಳಿಸಿತ್ತು

* ವಿಮಾನವು ಟೇಕ್‌–ಆಫ್‌ ಆಗುವ ವೇಳೆ ಸಹ ಪೈಲಟ್‌ ವಿಮಾನ ಚಲಾಯಿಸುತ್ತಿದ್ದರು. ಕ್ಯಾಪ್ಟನ್‌ ಮೇಲ್ವಿಚಾರಣೆ ನಡೆಸುತ್ತಿದ್ದರು. ಟೇಕ್‌–ಆಫ್‌ ಆದ 30 ಸೆಕೆಂಡ್‌ಗಳಲ್ಲಿ ಅಪಘಾತ ಸಂಭವಿಸಿದೆ

* ವಿಮಾನಕ್ಕೆ ಪೂರೈಸಲಾಗಿದ್ದ ಇಂಧನವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದ್ದು, ತೃಪ್ತಿದಾಯಕ ವರದಿ ಬಂದಿದೆ

* ಆಕಾಶವು ಶುಭ್ರವಾಗಿತ್ತು, ವಿಮಾನ ಹಾರಾಟಕ್ಕೆ ಪೂರಕವಾಗಿತ್ತು. ಯಾವುದೇ ಪಕ್ಷಿಗಳ ಹಾರಾಟ ಅಥವಾ ಹವಾಮಾನ ವೈಪರೀತ್ಯ ಈ ಅವಘಡಕ್ಕೆ ಕಾರಣವಲ್ಲ

* ಇಬ್ಬರೂ ಪೈಲಟ್‌ಗಳು ಆರೋಗ್ಯವಂತರಾಗಿದ್ದರು. ಅಲ್ಲದೆ ವಿಮಾನ ಹಾರಾಟದಲ್ಲಿ ಸಾಕಷ್ಟು ಅನುಭವಿಗಳಾಗಿದ್ದರು

* ಬೋಯಿಂಗ್‌ 787–8 ವಿಮಾನಗಳ ಎಂಜಿನ್‌ ನಿರ್ವಾಹಕರು ಮತ್ತು ತಯಾರಿಕರಿಗೆ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳಬಾರದು

‘ಏಕೆ ಆಫ್‌ ಮಾಡಿದ್ದೀರಿ?’

ಎಂಜಿನ್‌ಗಳ ಇಂಧನ ಕಡಿತಕ್ಕೆ ಸಂಬಂಧಿಸಿದಂತೆ ಕಾಕ್‌ಪಿಟ್‌ನಲ್ಲಿನ ಪೈಲಟ್‌ಗಳ ನಡುವಿನ ಸಂಭಾಷಣೆ ಬಗ್ಗೆ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಕ್‌ಪಿಟ್‌ನ ವಾಯ್ಸ್‌ ರೆಕಾರ್ಡರ್‌ (ಸಿವಿಆರ್‌) ಪ್ರಕಾರ ಒಬ್ಬ ಪೈಲಟ್‌ ಮತ್ತೊಬ್ಬ ಪೈಲಟ್‌ ಬಳಿ ‘ನೀವು ಎಂಜಿನ್‌ ಅನ್ನು ಏಕೆ ಆಫ್‌ ಮಾಡಿದ್ದೀರಿ’ ಎಂದು ಕೇಳಿದ್ದಾರೆ. ಆಗ ಮತ್ತೊಬ್ಬ ಪೈಲಟ್‌ ‘ನಾನು ಏನನ್ನು ಮಾಡಲಿಲ್ಲ’ ಎಂದು ಉತ್ತರಿಸಿದ್ದಾರೆ.  ಅದರೆ ಈ ಲೋಪ ಹೇಗೆ ಸಂಭವಿಸಿತು ಮತ್ತು ಇದಕ್ಕೆ ಯಾರು ಕಾರಣ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ. 

ಇದು ಪ್ರಾಥಮಿಕ ವರದಿಯಾಗಿದ್ದು ಅದರ ಆಧಾರದ ಮೇಲೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಪೈಲಟ್‌ಗಳ ಸಂಭಾಷಣೆಯು ಸಂಕ್ಷಿಪ್ತವಾಗಿ ಇರುವುದರಿಂದ ಅದರ ಆಧಾರದ ಮೇಲೂ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಈ ಬಗ್ಗೆ ಪೂರ್ಣ ತನಿಖಾ ವರದಿಗಾಗಿ ನಿರೀಕ್ಷಿಸುತ್ತಿದ್ದೇವೆ
–ಮುರಳೀಧರ್‌ ಮೊಹೋಲ್‌, ಕೇಂದ್ರ ವಿಮಾನಯಾನ ರಾಜ್ಯ ಸಚಿವ
ಎಎಐಬಿ ತನಿಖಾ ತಂಡ ಮತ್ತು ಇತರ ಅಧಿಕಾರಿಗಳೊಂದಿಗೆ ತನಿಖೆಗೆ ಸಂಪೂರ್ಣ ಸಹಕಾರ ಮುಂದುವರಿಸುತ್ತೇವೆ.
–ಏರ್‌ ಇಂಡಿಯಾ 
ವಿಮಾನ ದುರಂತದ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಮತ್ತು ನಮ್ಮ ಗ್ರಾಹಕರನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ.
–ಬೋಯಿಂಗ್‌ 

ಇಂಧನ ಸ್ವಿಚ್‌: ಆಕಸ್ಮಿಕವಾಗಿ ಬದಲಾಗದು

ನವದೆಹಲಿ/ಮುಂಬೈ: ವಿಮಾನದಲ್ಲಿನ ಇಂಧನ ಪೂರೈಕೆಯ ಸ್ವಿಚ್‌ ಆಕಸ್ಮಿಕವಾಗಿ ಬದಲಾಗುವುದಿಲ್ಲ. ಹಾಗೆಲ್ಲ ಅದನ್ನು ಬದಲಿಸುವಂತೆಯೂ ಇಲ್ಲ. ಅದಕ್ಕೆ ಒಂದು ಕಾರ್ಯವಿಧಾನವಿದೆ ಎನ್ನುತ್ತಾರೆ ಅನುಭವಿ ಪೈಲಟ್‌ ಒಬ್ಬರು.  ಇಂಧನದ ಸ್ವಿಚ್‌ಗಳನ್ನು ಸಾಮಾನ್ಯವಾಗಿ ‘ಬ್ರಾಕೆಟ್‌’ಗಳಿಂದ ರಕ್ಷಿಸಲಾಗಿರುತ್ತದೆ. ಹೀಗಾಗಿ ಅವುಗಳ ಆಕಸ್ಮಿಕ ಚಲನೆ ಸಾಧ್ಯವಿಲ್ಲ. ಅವುಗಳ ಸ್ಥಾನವನ್ನು ಬದಲಿಸಲು ಮೊದಲಿಗೆ ಸ್ವಿಚ್‌ಗಳನ್ನು ಮೇಲಕ್ಕೆ ಎತ್ತಬೇಕು. ಬೋಯಿಂಗ್‌ 787 ಡ್ರೀಮ್‌ಲೈನರ್‌ನಲ್ಲಿ ಇಂಧನ ಸ್ವಿಚ್‌ಗಳು ‘ಥ್ರಸ್ಟ್‌ ಲಿವರ್‌’ಗಳ ಅಡಿಯಲ್ಲಿರುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ. ವಿಮಾನ ಸಕಾರಾತ್ಮಕವಾಗಿ ಹಾರಿದಾಗ ಪೈಲಟ್‌ ‘ಗೇರ್‌ ಅಪ್‌’ ಎಂದು ಹೇಳಬೇಕು. ಅದನ್ನು ಹೇಳಲಾಗಿದೆಯೋ ಇಲ್ಲವೋ ಎಂಬುದರ ಬಗ್ಗೆ ‘ಟ್ರಾನ್ಸ್‌ಕ್ರಿಪ್ಟ್‌’ ಉಲ್ಲೇಖಿಸಿಲ್ಲ.

‘ಗೇರ್‌ ಲಿವರ್‌’ ಏಕೆ ಕೆಳಗಿದೆ? ‘ಗೇರ್‌ ಅಪ್‌’ ಮಾಡುವ ಹಂತದಲ್ಲಿ ಏನಾಗಿರಬಹುದು ಎಂಬ ಪ್ರಶ್ನೆಗಳು ಕಾಡುತ್ತಿವೆ ಎಂದಿದ್ದಾರೆ. ‘ಇಂಧನ ಪೂರೈಕೆ ಸ್ವಿಚ್‌ಗಳ ಸ್ಥಾನವನ್ನು ಮಾನವ ಸಂಪರ್ಕದಿಂದ ಮಾತ್ರ ಬದಲಿಸಬಹುದು. ಈ ವಿಮಾನದಲ್ಲಿ ಸ್ವಿಚ್‌ಗಳ ಸ್ಥಾನ ಏಕೆ ಬದಲಾಗಿದೆ ಎಂಬುದರ ಬಗ್ಗೆ ಪ್ರಾಥಮಿಕ ವರದಿಯಲ್ಲಿ ಸ್ಪಷ್ಟ ಮಾಹಿತಿಯಿಲ್ಲ’ ಎಂದು ಭಾರತೀಯ ಪೈಲಟ್‌ಗಳ ಒಕ್ಕೂಟದ (ಎಫ್‌ಪಿಐ) ಅಧ್ಯಕ್ಷ  ಸಿ.ಎಸ್‌.ರಾಂಧವ ಪ್ರತಿಕ್ರಿಯಿಸಿದ್ದಾರೆ.

‘ಇದು ತಾಂತ್ರಿಕ ಅಥವಾ ಸಾಫ್ಟ್‌ವೇರ್‌ ಲೋಪದಿಂದ ಸಂಭವಿಸಿದೆಯೇ ಎಂಬುದರತ್ತಲೂ ಗಮನಹರಿಸಬೇಕು’ ಎಂದು ಡಿಜಿಸಿಎಯ ಹಿರಿಯ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಪಾರದರ್ಶಕ ತನಿಖೆಗೆ ಆಗ್ರಹ: ‘ಪೈಲಟ್‌ಗಳೇ ದೋಷ ಎಸಗಿರಬಹುದು ಎಂಬಂತೆ ಪ್ರಾಥಮಿಕ ತನಿಖಾ ವರದಿ ಸೂಚಿಸುತ್ತದೆ. ಇದು ಸರಿಯಲ್ಲ. ದುರಂತದ ಕುರಿತು ಮುಕ್ತ ಮತ್ತು ಪಾರದರ್ಶಕ ತನಿಖೆ ಆಗಬೇಕು’ ಎಂದು ಭಾರತೀಯ ವಿಮಾನಯಾನ ಪೈಲಟ್‌ಗಳ ಸಂಘ (ಎಎಲ್‌ಪಿಎ) ಆಗ್ರಹಿಸಿದೆ.   ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ತನಿಖಾ ಪ್ರಕ್ರಿಯೆಯಲ್ಲಿ ತನ್ನ ಪ್ರತಿನಿಧಿಗಳನ್ನು ವೀಕ್ಷಕರನ್ನಾಗಿಸಬೇಕು ಎಂದು ಸಂಘ ಒತ್ತಾಯಿಸಿದೆ. 

ಇಂಧನ ನಿಯಂತ್ರಣ ಸ್ವಿಚ್

  • 2018ರ ಡಿಸೆಂಬರ್‌ನಲ್ಲಿ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ನಿಂದ (ಎಫ್‌ಎಎ) ಸ್ಪೆಷಲ್‌ ಏರ್‌ವರ್ದಿನೆಸ್ ಇನ್‌ಫಾರ್ಮೇಶನ್‌ ಬುಲೆಟಿನ್‌ (ಎಸ್‌ಎಐಬಿ) ಬಿಡುಗಡೆ   

  • ಇಂಧನ ನಿಯಂತ್ರಣ ಸ್ವಿಚ್‌ನ ಲಾಕಿಂಗ್‌ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬುಲೆಟಿನ್‌ನಲ್ಲಿ ಎಚ್ಚರಿಕೆ

  • ಎಸ್‌ಎಐಬಿಯು ತನ್ನ ನಿರ್ದೇಶನದ ಕಡ್ಡಾಯ ಅನುಷ್ಠಾನಕ್ಕೆ ಸೂಚಿಸಿಲ್ಲದ ಕಾರಣ ಇದಕ್ಕೆ ಸಂಬಂಧಿಸಿದ ಪರಿಶೀಲನೆ ನಡೆಸಿರಲಿಲ್ಲ‌: ಏರ್‌ ಇಂಡಿಯಾ

  • ನಿರ್ವಹಣೆ ದಾಖಲೆ ಪ್ರಕಾರ, ಥ್ರೋಟಲ್‌ ಕಂಟ್ರೋಲ್‌ ಮಾಡ್ಯುಲ್‌ ಅನ್ನು (ಎಂಜಿನ್‌ ಒಳಗೆ ಗಾಳಿ ಪ್ರವಹಿಸುವಿಕೆಯನ್ನು ನಿಯಂತ್ರಿಸುವ ವಿದ್ಯುತ್‌ಚಾಲಿತ ಸಾಧನ) 2019 ಮತ್ತು 2023ರಲ್ಲಿ ಬದಲಾಯಿಸಲಾಗಿತ್ತು

  • ಈ ಬದಲಾವಣೆಯು ಇಂಧನ ನಿಯಂತ್ರಣ ಸ್ವಿಚ್‌ಗೆ ಸಂಬಂಧಿಸಿಲ್ಲ

  • 2023ರಿಂದ ಇಂಧನ ನಿಯಂತ್ರಣ ಸ್ವಿಚ್‌ಗೆ ಸಂಬಂಧಿಸಿದ ದೋಷದ ಬಗ್ಗೆ ವರದಿಯಾಗಿಲ್ಲ

ತನಿಖಾ ಹಾದಿ...

  • ವಿಮಾನದ ಅವಶೇಷ ಬಿದ್ದ ಸ್ಥಳದಲ್ಲಿ ಪರಿಶೀಲನೆ. ಡ್ರೋನ್‌ ಫೋಟೊಗ್ರಫಿ ಮತ್ತು ವಿಡಿಯೊ ಚಿತ್ರೀಕರಣ ಪೂರ್ಣ

  • ಸುರಕ್ಷಿತ ಸ್ಥಳಕ್ಕೆ ಅವಶೇಷಗಳ ರವಾನೆ

  • ಎರಡೂ ಎಂಜಿನ್‌ ಪತ್ತೆ, ವಿಮಾನ ನಿಲ್ದಾಣದ ಹ್ಯಾಂಗರ್‌ ಸ್ಥಳದಲ್ಲಿ ಸಂಗ್ರಹ

  • ಇಂಧನ ಟ್ಯಾಂಕರ್‌ಗಳಿಂದ ಮಾದರಿ ಸಂಗ್ರಹ,  ಟ್ಯಾಂಕರ್‌ಗಳ ಪರಿಶೀಲನೆ; ಯಾವುದೇ ಲೋಪ ಕಂಡುಬಂದಿಲ್ಲ

  • ಪತನವಾದ ವಿಮಾನದ ಆ್ಯಕ್ಸಿಲರಿ ಪವರ್ ಯುನಿಟ್‌ (ಎಪಿಯು), ಎಡಭಾಗದ ರೆಕ್ಕೆಯ ರಿಫ್ಯುಯೆಲ್‌/ ಜೆಟ್ಟಿಸನ್‌ ವಾಲ್ವ್‌ನಿಂದ ಸೀಮಿತ ಪ್ರಮಾಣದ ಇಂಧನ ಮಾದರಿ ಸಂಗ್ರಹ

  • ಬ್ಲ್ಯಾಕ್‌ಬಾಕ್ಸ್‌ನಿಂದ ಸಂಗ್ರಹಿಸಲಾದ ಕಾಕ್‌ಪಿಟ್ ದತ್ತಾಂಶದ ವಿಶ್ಲೇಷಣೆ 

  • ಪ್ರತ್ಯಕ್ಷದರ್ಶಿಗಳು ಮತ್ತು ಬದುಕುಳಿದ ಏಕೈಕ ಪ್ರಯಾಣಿಕನಿಂದ ಹೇಳಿಕೆ ದಾಖಲು

  • ಮರಣೋತ್ತರ ವರದಿಗಳ ಸಮಗ್ರ ವಿಶ್ಲೇಷಣೆ

ಆಧಾರ: ವಿಮಾನ ಅಪಘಾತ ತನಿಖಾ ಬ್ಯುರೊ (ಎಎಐಬಿ) ಪ್ರಾಥಮಿಕ ತನಿಖಾ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.