ADVERTISEMENT

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ: ವರದಿ ಕೇಳಿದ ಡಿಜಿಸಿಎ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 12:37 IST
Last Updated 4 ಜನವರಿ 2023, 12:37 IST
..
..   

‌ನವದೆಹಲಿ (ಪಿಟಿಐ): ಪಾನಮತ್ತ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಬಗ್ಗೆ ಏರ್ ಇಂಡಿಯಾದಿಂದ ವರದಿ ಕೋರಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಬುಧವಾರ ತಿಳಿಸಿದೆ.

2022ರ ನ. 26 ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಸಂಚರಿಸುತ್ತಿದ್ದ ಏರ್‌ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಈ ಘಟನೆ ನಡೆದಿತ್ತು.

ಘಟನೆ ಬಗ್ಗೆ ಮಹಿಳೆ ವಿಮಾನ ಸಿಬ್ಬಂದಿಗೆ ದೂರು ನೀಡಿದ್ದು, ತನ್ನ ಬಟ್ಟೆ, ಬ್ಯಾಗು, ಶೂ ಮೂತ್ರದಿಂದ ಒದ್ದೆಯಾಗಿದೆ ಎಂದು ತಿಳಿಸಿದ್ದಾರೆ. ಬಳಿಕ ವಿಮಾನ ಸಿಬ್ಬಂದಿ ಬೇರೆ ಬಟ್ಟೆ ಹಾಗೂ ಚಪ್ಪಲಿ ನೀಡಿದ್ದಾರೆ.

ADVERTISEMENT

ಏರ್ ಇಂಡಿಯಾ ಈ ವಿಷಯ ಪರಿಶೀಲಿಸಲು ಮತ್ತು ಸೂಕ್ತ ಕ್ರಮದ ಬಗ್ಗೆ ನಿರ್ಧರಿಸಲು ಆಂತರಿಕ ಸಮಿತಿ ರಚಿಸಿದೆ ಎಂದು ವರದಿ ತಿಳಿಸಿದೆ.

‘ಅನುಚಿತವಾಗಿ ವರ್ತಿಸಿದ ವ್ಯಕ್ತಿಯ ವಿರುದ್ಧ ತನಿಖೆ ನಡೆಸಲು ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರು ಮತ್ತು ನಿಯಂತ್ರಣ ಪ್ರಾಧಿಕಾರಗಳಿಗೆ ವರದಿ ಮಾಡಲಾಗಿದೆ. ತನಿಖೆ ನಡೆಯುತ್ತಿರುವುದರಿಂದ ಮಹಿಳೆ ಮತ್ತು ಆಕೆಯ ಕುಟುಂಬದೊಂದಿಗೆ ನಿಯಮಿತ ಸಂಪರ್ಕದಲ್ಲಿದ್ದೇವೆ’ ಎಂದು ಏರ್ ಇಂಡಿಯಾ ವಕ್ತಾರರು ಬುಧವಾರ ತಿಳಿಸಿದ್ದಾರೆ.

‘ನಾವು ವಿಮಾನಯಾನ ಸಂಸ್ಥೆಯಿಂದ ವರದಿ ಕೇಳುತ್ತಿದ್ದೇವೆ ಮತ್ತು ಬೇಜವಾಬ್ದಾರಿ ತೋರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಹಿಳೆ ಟಾಟಾ ಗ್ರೂಪ್‌ನ ಮುಖ್ಯಸ್ಥ ಎನ್. ಚಂದ್ರಶೇಖರ್ ಅವರಿಗೆ ಇ–ಮೇಲ್‌ ಮೂಲಕ ದೂರು ನೀಡಿದ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.