ADVERTISEMENT

ತಮಿಳುನಾಡು | ಎಐಎಡಿಎಂಕೆ, ಬಿಜೆಪಿ ಮೈತ್ರಿ ಘೋಷಣೆ

ತಮಿಳುನಾಡಿನಲ್ಲಿ ಎನ್‌ಡಿಎಗೆ ಪಳನಿಸ್ವಾಮಿ ನಾಯಕತ್ವ: ಶಾ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 16:16 IST
Last Updated 11 ಏಪ್ರಿಲ್ 2025, 16:16 IST
   

ಚೆನ್ನೈ: ಮುಂದಿನ ವರ್ಷ ತಮಿಳುನಾಡು ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಲು ಶಪಥ ಕೈಗೊಂಡಿರುವ ಬಿಜೆಪಿ ಹಾಗೂ ಎಐಎಡಿಎಂಕೆ, ಮತ್ತೆ ಮೈತ್ರಿ ಮಾಡಿಕೊಂಡಿವೆ.

ಕೆ.ಅಣ್ಣಾಮಲೈ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದು, ನೈನಾರ್ ನಾಗೇಂದ್ರನ್ ಅವರು ಪಕ್ಷದ ಚುಕ್ಕಾಣಿ ವಹಿಸಿಕೊಂಡಿದ್ದಾರೆ. ಮತ್ತೊಂದೆಡೆ, ಒಂದೂವರೆ ವರ್ಷದ ಹಿಂದೆ ಎನ್‌ಡಿಎದಿಂದ ಹೊರ ನಡೆದಿದ್ದ ಎಐಎಡಿಎಂಕೆ ಮತ್ತೆ ಅದರ ತೆಕ್ಕೆಗೆ ಮರಳಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಎಐಎಡಿಎಂಕೆ ನಾಯಕ ಇ.ಕೆ.ಪಳನಿಸ್ವಾಮಿ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ, ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದನ್ನು ಘೋಷಿಸಿದರು.

ADVERTISEMENT

‘ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗಳನ್ನು ಒಟ್ಟಾಗಿ ಎದುರಿಸಲು ಎಐಎಡಿಎಂಕೆ ಹಾಗೂ ಬಿಜಿಪಿ ನಾಯಕರು ಇಂದು ನಿರ್ಧಾರ ಕೈಗೊಂಡಿದ್ದಾರೆ. ಪಳನಿಸ್ವಾಮಿ ಅವರೇ ತಮಿಳುನಾಡಿನಲ್ಲಿ ಎನ್‌ಡಿಎ ಮುನ್ನಡೆಸುವರು’ ಎಂದು ಹೇಳುವ ಮೂಲಕ, ಮೈತ್ರಿಕೂಟದ ನಾಯಕತ್ವದ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂಬ ಸಂದೇಶವನ್ನು ಅಮಿತ್‌ ಶಾ ರವಾನಿಸಿದ್ದಾರೆ.

‘ಎನ್‌ಡಿಎ ಮೈತ್ರಿಕೂಟ ತಮಿಳುನಾಡಿನಲ್ಲಿ ಸರ್ಕಾರ ರಚಿಸುವ ಗುರಿ ಹೊಂದಿದೆ’ ಎಂದು ಹೇಳಿದ ಶಾ, ಚುನಾವಣೆಯಲ್ಲಿ ಗೆದ್ದ ನಂತರ ಉಳಿದ ವಿಚಾರಗಳ ಕುರಿತು ಅಂಗಪಕ್ಷಗಳು ನಿರ್ಧರಿಸಲಿವೆ’ ಎಂದರು.

ಉಭಯ ಪಕ್ಷಗಳ ನಡುವಿನ ಮೈತ್ರಿ ಕುರಿತು ಘೋಷಣೆ ಮಾಡಿದ ನಂತರ ಶಾ ಅವರು ಪಳನಿಸ್ವಾಮಿ ನಿವಾಸಕ್ಕೆ ತೆರಳಿ, ಭೋಜನಕೂಟದಲ್ಲಿ ಪಾಲ್ಗೊಂಡು ನಂತರ ದೆಹಲಿಗೆ ಪ್ರಯಾಣ ಬೆಳೆಸಿದರು.

‘ಅಧಿಕಾರ ಹಸ್ತಾಂತರ ಸುಲಲಿತ’: ರಾಜ್ಯದಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಅಣ್ನಾಮಲೈ ವಿರೋಧಿಸುತ್ತಲೇ ಬಂದಿದ್ದರು. ಪಕ್ಷದ ಹಿತದೃಷ್ಟಿಯಿಂದ ಮೈತ್ರಿ ಬೇಡ ಎಂಬುದು ಅವರ ವಾದವಾಗಿತ್ತು.

ಆದರೆ, ಎಐಎಡಿಎಂಕೆ ಸಖ್ಯ ತೊರೆದು ಬಿಜೆಪಿ ಸೇರಿರುವ ನಾಗೇಂದ್ರನ್‌ ಅವರಿಗೆ ಈಗ ಪಕ್ಷದ ಸಾರಥ್ಯ ಒಲಿದಿದೆ. ರಾಜ್ಯದಲ್ಲಿ ಎರಡೂ ಪಕ್ಷಗಳ ನಡುವಿನ ಮೈತ್ರಿಗೆ ಧಕ್ಕೆಯಾಗಬಾರದು ಎಂಬ ದೃಷ್ಟಿಯಿಂದ ಬಿಜೆಪಿ ವರಿಷ್ಠರು ನಾಯಕತ್ವ ಬದಲಾವಣೆ ನಿರ್ಧಾರ ಕೈಗೊಂಡಿದ್ದು, ಅಧಿಕಾರ ಹಸ್ತಾಂತರ ಕೂಡ ಸುಗಮವಾಗಿಯೇ ನಡೆದಿರುವುದು ಗಮನಾರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.