ADVERTISEMENT

ಗಂಭೀರ ಸ್ಥಿತಿಯಲ್ಲಿದ್ದ ತುಂಬು ಗರ್ಭಿಣಿಗೆ ರಕ್ತದಾನ ಮಾಡಿ ಜೀವ ಉಳಿಸಿದ ವೈದ್ಯ

ಪಿಟಿಐ
Published 21 ನವೆಂಬರ್ 2022, 14:56 IST
Last Updated 21 ನವೆಂಬರ್ 2022, 14:56 IST
   

ಭುವನೇಶ್ವರ: ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಗೆ ರಕ್ತದಾನ ಮಾಡುವ ಮೂಲಕ ಒಡಿಶಾ ರಾಜಧಾನಿ ಭುವನೇಶ್ವರದ ಏಮ್ಸ್ ಆಸ್ಪತ್ರೆ ವೈದ್ಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆಸ್ಪತ್ರೆಯ ರಕ್ತ ಪೂರೈಕೆ ವಿಭಾಗದ ವೈದ್ಯ ಡಾ. ದೇಬಶಿಶ್ ಮಿಶ್ರಾ, ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಗೆ ಬಿ–ನೆಗೆಟಿವ್ ರಕ್ತದಾನ ಮಾಡಿದ್ದಾರೆ. ನವೆಂಬರ್ 3 ರಂದು ಈ ಘಟನೆ ನಡೆದಿದ್ದು, ತಡವಾಗಿ ಮಾಹಿತಿ ಹೊರಬಿದ್ದಿದೆ. ನವೆಂಬರ್ 19ರಂದು ಮಹಿಳೆ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ನವೆಂಬರ್ 3ರಂದು ಗರ್ಭಿಣಿಗೆ ತುರ್ತು ರಕ್ತ ಅಗತ್ಯವಿರುವ ಬಗ್ಗೆ ಕರ್ತವ್ಯದಲ್ಲಿದ್ದ ವೈದ್ಯರ ಗಮನಕ್ಕೆ ಬಂದಿದೆ. ಆದರೆ, ಆಕೆಯ ಸಂಬಂಧಿಕರಲ್ಲಿ ಅಗತ್ಯವಿದ್ದ ಮಾದರಿಯ ರಕ್ತ ಪತ್ತೆಯಾಗಿಲ್ಲ. ಈ ಸಂದರ್ಭ ಸ್ವಯಂಪ್ರೇರಿತವಾಗಿ ಮುಂದೆ ಬಂದ ವೈದ್ಯ ದೇಬಶಿಶ್ ಮಿಶ್ರಾ, ರಕ್ತದಾನ ಮಾಡಿ ಮಹಿಳೆಯ ಜೀವ ಉಳಿಸಿದ್ದಾರೆ.

ADVERTISEMENT

ಈ ಬಗ್ಗೆ ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಆಸ್ಪತ್ರೆ, ಆ ದಿನ ಮಹಿಳೆಗೆ ಅಗತ್ಯವಿದ್ದ ಬಿ–ನೆಗೆಟಿವ್ ರಕ್ತವು ರಕ್ತ ನಿಧಿ ಕೇಂದ್ರದಲ್ಲಿ ಲಭ್ಯವಿರಲಿಲ್ಲ ಎಂದು ತಿಳಿಸಿದೆ.

‘ರೋಗಿಗೆ ಅಗತ್ಯವಿದ್ದ ರಕ್ತ ಸಿಗದೆ ಹೋಗಿದ್ದಿದ್ದರೆ, ಆಕೆ ಸಾವಿಗೀಡಾಗುತ್ತಿದ್ದರು’ ಎಂದು ಮಹಿಳೆಗೆ ಚಿಕಿತ್ಸೆ ನೀಡಿದ ಮತ್ತೊಬ್ಬ ವೈದ್ಯರು ತಿಳಿಸಿದ್ದಾರೆ.

ಡಾ. ಮಿಶ್ರಾ ಅವರ ನೆರವನ್ನು ಏಮ್ಸ್ ಆಸ್ಪತ್ರೆ ನಿರ್ದೇಶಕ ಪ್ರೊಫೆಸರ್ ಅಶುತೋಷ್ ಬಿಶ್ವಾಸ್ ಶ್ಲಾಘಿಸಿದ್ದಾರೆ.

ವೈದ್ಯರು ಕೇವಲ ಚಿಕಿತ್ಸೆ ನೀಡುವುದಲ್ಲ. ಅಗತ್ಯವಿರುವವರಿಗೆ ನೆರವು ನೀಡುವ ಚಿನ್ನದಂಥ ಹೃದಯ ಹೊಂದಿರಬೇಕು. ಆ ವಿಷಯದಲ್ಲಿ, ಮಿಶ್ರಾ ಇತರ ವೈದ್ಯರಿಗೆ ಉದಾಹರಣೆಯಾಗಿದ್ದಾರೆ ಎಂದ ಬಿಶ್ವಾಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.