ADVERTISEMENT

ಏರ್‌ ಇಂಡಿಯಾ ದುರಂತ | ಪೈಲಟ್‌ಗಳ ‘ಅನಾರೋಗ್ಯ ರಜೆ’ ಹೆಚ್ಚಳ

ಅಹಮದಾಬಾದ್‌ ದುರಂತ: ವಿಮಾನದಲ್ಲಿ ಹೆಚ್ಚುತ್ತಿರುವ ತಾಂತ್ರಿಕ ಸಮಸ್ಯೆ; ಡಿಜಿಸಿಎ ನಿಗಾ

ಪಿಟಿಐ
Published 24 ಜುಲೈ 2025, 15:32 IST
Last Updated 24 ಜುಲೈ 2025, 15:32 IST
Mumbai: Flights parked on the runway at Chhatrapati Shivaji Maharaj International Airport, in Mumbai
Mumbai: Flights parked on the runway at Chhatrapati Shivaji Maharaj International Airport, in Mumbai   

ನವದೆಹಲಿ: ಅಹಮದಾಬಾದ್‌ ವಿಮಾನ ದುರಂತದ ನಂತರ ‘ಅನಾರೋಗ್ಯ’ದ ಕಾರಣ ನೀಡಿ, ಏರ್‌ ಇಂಡಿಯಾದ ಹೆಚ್ಚಿನ ಪೈಲಟ್‌ಗಳು ರಜೆ ಹಾಕುತ್ತಿದ್ದಾರೆ ಎಂದು ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಮುರಳೀಧರ್‌ ಮೊಹೊಲ್‌ ಲೋಕಸಭೆಗೆ ತಿಳಿಸಿದ್ದಾರೆ. 

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೊಹೊಲ್‌, ‘ಅಹಮದಾಬಾದ್ ಘಟನೆಯ ನಂತರ ಏರ್‌ ಇಂಡಿಯಾ ಪೈಲಟ್‌ಗಳು ‘ಅನಾರೋಗ್ಯ ರಜೆ’ ಪಡೆಯುತ್ತಿರುವುದು ಸ್ವಲ್ಪ ಏರಿಕೆಯಾಗಿದೆ. ಜೂನ್‌ 16ರಂದು ಒಟ್ಟು 112  ಮಂದಿ  ‘ಅನಾರೋಗ್ಯ ರಜೆ’ ಹಾಕಿದ್ದರು. ಇವರಲ್ಲಿ 51 ಮಂದಿ ಮುಖ್ಯ ಪೈಲಟ್‌ಗಳು (ಪಿ1)  ಮತ್ತು 61 ಮಂದಿ ಸಹ ಪೈಲಟ್‌ಗಳು (ಪಿ2) ಸೇರಿದ್ದಾರೆ’ ಎಂದು ಮಾಹಿತಿ ನೀಡಿದರು. 

‘ವಿಮಾನ ಸಿಬ್ಬಂದಿ, ಪೈಲಟ್‌ಗಳು, ‘ಎಟಿಸಿ’ ಮೇಲಿನ ಕಾರ್ಯದೊತ್ತಡ  ಕಡಿಮೆ ಮಾಡಲು ಮತ್ತು  ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ಕೆಲಸ ಅವಧಿಯನ್ನು ನಿರ್ವಹಣೆ ಮಾಡುವಂತೆ ಡಿಜಿಸಿಎ 2023ರಲ್ಲಿ ವೈದ್ಯಕೀಯ ಸುತ್ತೋಲೆ ಹೊರಡಿಸಿದೆ. ಇದರ ಅನ್ವಯ ಸಿಬ್ಬಂದಿಗೆ ಸಲಹೆ, ಮಾರ್ಗದರ್ಶನ ನೀಡಲಾಗುತ್ತಿದೆ‘ ಎಂದು ಹೇಳಿದ್ದಾರೆ.

ADVERTISEMENT

ಏರ್‌ ಇಂಡಿಯಾ ಬೋಯಿಂಗ್‌ 787–8 ವಿಮಾನವು ಜೂನ್‌ 12ರಂದು ಅಹಮದಾಬಾದ್‌ನಲ್ಲಿ ಪತನಗೊಂಡು 241 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು. ವಿಮಾನವು ವೈದ್ಯಕೀಯ ಕಾಲೇಜಿನ ವಸತಿ ನಿಲಯದ ಕಟ್ಟಡಕ್ಕೆ ಅಪ್ಪಳಿಸಿದ್ದರಿಂದ, ಆ ಕಟ್ಟಡಲ್ಲಿದ್ದ 19 ಮಂದಿ ಮೃತಪಟ್ಟಿದ್ದರು.

ಉತ್ತರದಾಯಿ ವ್ಯವಸ್ಥಾಪಕನಿಗೆ  ₹30 ಲಕ್ಷ ದಂಡ:

‘ಏರ್‌ಬಸ್‌ ಎ320’ ವಿಮಾನದಲ್ಲಿ ಅಳವಡಿಸಲಾದ ಎಂಜಿನ್‌ಗೆ ಸಂಬಂಧಿಸಿದಂತೆ ಏರ್‌ ಇಂಡಿಯಾ, ಯುರೋಪಿಯನ್ ಯೂನಿಯನ್‌ ಏವಿಯೇಷನ್ ​​ಸೇಫ್ಟಿ ಏಜೆನ್ಸಿಯ (ಇಎಎಸ್‌ಎ)  ನಿರ್ದೇಶನಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ‘ಡಿಜಿಸಿಎ’ ಏರ್‌ ಇಂಡಿಯಾ ಎಕ್ಸ್‌ಪ್ರಸ್‌ನ ನಾಲ್ವರು ಅಧಿಕಾರಿಗಳಿಗೆ ಭಾರಿ ಮೊತ್ತದ ದಂಡ ವಿಧಿಸಿದ್ದು, ಕಠಿಣ ಕ್ರಮ ಕೈಗೊಂಡಿದೆ ಎಂದು ಸಚಿವ ಮುರಳೀಧರ್‌ ಮೊಹೊಲ್‌ ಹೇಳಿದ್ದಾರೆ. 

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಗುಣಮಟ್ಟ ವ್ಯವಸ್ಥಾಪಕನ್ನು ಕೆಲಸದಿಂದ ವಜಾಗೊಳಿಸಲಾಗಿದೆ.  ನಿರ್ವಹಣಾ ವ್ಯವಸ್ಥಾಪಕನಿಗೆ ನೋಟಿಸ್‌ ನೀಡಲಾಗಿದ್ದು, ₹1.5 ಲಕ್ಷ ದಂಡ ವಿಧಿಸಲಾಗಿದೆ. ಉತ್ತರದಾಯಿ ವ್ಯವಸ್ಥಾಪಕನಿಗೆ ₹30 ಲಕ್ಷ ದಂಡ ವಿಧಿಸಲಾಗಿದೆ ಎಂದು ವಿವರಿಸಿದರು.

ವಿಮಾನ ದುರಂತದಿಂದ ನೆಲದ ಮೇಲೆ ಸಾರ್ವಜನಿಕರಿಗೆ ಆಗಿರುವ ಹಾನಿಗೆ ಪರಿಹಾರ ನೀಡುವ ಯಾವುದೇ ನೀತಿ ಸದ್ಯ ನಾಗರಿಕ ವಿಮಾನಯಾನ ಸಚಿವಾಲಯದ ಮುಂದಿಲ್ಲ
ಮುರಳೀಧರ್‌ ಮೊಹೊಲ್‌ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ 

ಏರ್‌ ಇಂಡಿಯಾಕ್ಕೆ 4  ಷೋಕಾಸ್‌ ನೋಟಿಸ್‌ 

ವಿಮಾನದ ಕ್ಯಾಬಿನ್‌ ಸಿಬ್ಬಂದಿ ಕೆಲಸದ ಸಮಯ ಮತ್ತು ವಿಶ್ರಾಂತಿ ತರಬೇತಿ ಕಾರ್ಯನಿರ್ವಹಣೆ ಹಂತದಲ್ಲಿನ ವಿವಿಧ ನಿಯಮಗಳ ಉಲ್ಲಂಘನೆಗಾಗಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಏರ್ ಇಂಡಿಯಾ ಸಂಸ್ಥೆಗೆ ನಾಲ್ಕು ಷೋಕಾಸ್‌ ನೋಟಿಸ್‌ಗಳನ್ನು ಜಾರಿಗೊಳಿಸಿದೆ.  ‘ನೋಟಿಸ್‌ಗೆ ನಿಗದಿತ ಸಮಯದಲ್ಲಿ ಉತ್ತರಿಸಲಾಗುವುದು. ನಮ್ಮ ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ’ ಎಂದು ಏರ್ ಇಂಡಿಯಾ ಹೇಳಿದೆ.

ತಾಂತ್ರಿಕ ಸಮಸ್ಯೆ‘ಡಿಜಿಸಿಎ’ಗೆ ದೂರು

 ಐದು ಭಾರತೀಯ ವಿಮಾನಯಾನ ಸಂಸ್ಥೆಗಳು ಈ ವರ್ಷದಲ್ಲಿ ಇದುವರೆಗೆ (ಜುಲೈ 21ರವರೆಗೆ)  ತಮ್ಮ ವಿಮಾನದಲ್ಲಿನ ತಾಂತ್ರಿಕ ಲೋಪಗಳಿಗೆ ಸಂಬಂಧಿಸಿದಂತೆ 183 ದೂರುಗಳನ್ನು ‘ಡಿಜಿಸಿಎ’ಗೆ ಸಲ್ಲಿಸಿವೆ. ಇದರಲ್ಲಿ  ಏರ್‌ ಇಂಡಿಯಾ ಕಂಪನಿಯದ್ದೇ 85 ದೂರುಗಳಿವೆ.  ಇಂಡಿಗೊ ಆಕಾಶ ಏರ್‌ ಕ್ರಮವಾಗಿ 62 ಮತ್ತು 28  ಸ್ಪೈಸ್‌ ಜೆಟ್‌ 8 ದೂರುಗಳನ್ನು ವರದಿ ಮಾಡಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.