ADVERTISEMENT

ಬೋಯಿಂಗ್‌ ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ಸಮಸ್ಯೆ ಇಲ್ಲ: ಏರ್ ಇಂಡಿಯಾ

ಪಿಟಿಐ
Published 22 ಜುಲೈ 2025, 14:27 IST
Last Updated 22 ಜುಲೈ 2025, 14:27 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಮುಂಬೈ: ‘ಬೋಯಿಂಗ್‌ 787 ಮತ್ತು 737 ಸರಣಿಯ ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ (ಎಫ್‌ಸಿಎಸ್‌) ಯಾವುದೇ ಸಮಸ್ಯೆ ಇಲ್ಲ’ ಎಂದು ಏರ್‌ ಇಂಡಿಯಾ ಮಂಗಳವಾರ ಹೇಳಿದೆ.

‘ಅಹಮದಾಬಾದ್‌ನಲ್ಲಿ ಜೂನ್‌ 12ರಂದು ಪತನಗೊಂಡಿದ್ದ ಏರ್‌ಇಂಡಿಯಾ ಬೋಯಿಂಗ್‌ 787–8 ವಿಮಾನದಲ್ಲಿ ಇಂಧನ ನಿಯಂತ್ರಣ ಸ್ವಿಚ್‌ ‘ಕಟ್‌ ಆಫ್‌’ ಸ್ಥಿತಿಯಲ್ಲಿ ಇತ್ತು ಎಂದು ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ಪ್ರಾಥಮಿಕ ವರದಿಯಲ್ಲಿ ಹೇಳಿತ್ತು. ಇದರ ಬೆನ್ನಲ್ಲೇ, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಬೋಯಿಂಗ್‌ 787 ಮತ್ತು 737 ಸರಣಿಯ ವಿಮಾನಗಳಲ್ಲಿ ‘ಎಫ್‌ಸಿಎಸ್‌’ ತಪಾಸಣೆ ನಡೆಸಿ, ಜುಲೈ 21ರ ಒಳಗಾಗಿ ವರದಿ ಸಲ್ಲಿಸುವಂತೆ ಏರ್ ಇಂಡಿಯಾಕ್ಕೆ ಸೂಚಿಸಿತ್ತು.

‘ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಲಾಗಿದ್ದ ತಪಾಸಣೆ ಪೂರ್ಣಗೊಂಡಿದೆ. ಬೋಯಿಂಗ್‌ 787 ಮತ್ತು 737 ಸರಣಿಯ ವಿಮಾನಗಳ ಎಂಜಿನ್‌ಗೆ ಇಂಧನ ಪೂರೈಸುವ ‘ಸ್ವಿಚ್‌ಗಳ ಲಾಕಿಂಗ್‌ ವ್ಯವಸ್ಥೆಯಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ’ ಎಂದು ಏರ್‌ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. 

ADVERTISEMENT

ಅಹಮದಾಬಾದ್‌ ವಿಮಾನ ದುರಂತದಲ್ಲಿ ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ 241 ಮಂದಿ ಮೃತಪಟ್ಟಿದ್ದರು. ವಿಮಾನವು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ಅಪ್ಪಳಿಸಿದ್ದರಿಂದ, ಅಲ್ಲಿದ್ದವರಲ್ಲಿ 19 ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.