ಎ.ಕೆ.ಭಾರ್ತಿ
ನವದೆಹಲಿ: ಏರ್ ಮಾರ್ಷಲ್ ಎ.ಕೆ.ಭಾರ್ತಿ ಅವರು ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಮುದ್ರ ದೇವತೆಯ ಮೇಲೆ ಶ್ರೀರಾಮನ ತಾಳ್ಮೆ ಮತ್ತು ಕೋಪದ ಕುರಿತು ರಾಮಚರಿತ ಮಾನಸದಲ್ಲಿ ಉಲ್ಲೇಖಿಸಿರುವ ದ್ವಿಪದಿಯನ್ನು ಉಲ್ಲೇಖಿಸುವ ಮೂಲಕ ನೆರೆದಿದ್ದ ದೊಡ್ಡ ಪತ್ರಕರ್ತರನ್ನು ಅಚ್ಚರಿಗೊಳಿಸಿದರು.
ಕಾರ್ಯಾಚರಣೆಯ ಮಹಾನಿರ್ದೇಶಕರು ಮೂರು ದಳಗಳ ಕಾರ್ಯಾಚರಣೆ ವಿವರ ನೀಡಿದ ಬಳಿಕ ಪತ್ರಕರ್ತರೊಬ್ಬರು, ‘ನೀವು ಸುದ್ದಿಗೋಷ್ಠಿ ಆರಂಭಿಸುವ ಮೊದಲು ಸೇನೆಯು ವಿಡಿಯೋ ದೃಶ್ಯಾವಳಿ ತೋರಿಸಲಾಯಿತು. ಅದರಲ್ಲಿ ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರ ಸಾಲುಗಳನ್ನು ಹಿನ್ನೆಲೆಯಾಗಿ ಬಳಸಿಕೊಳ್ಳಲಾಗಿತ್ತು. ಭಾನುವಾರದ ಪತ್ರಿಕಾಗೋಷ್ಠಿಯ ವಿಡಿಯೋದಲ್ಲಿ ಶಿವ ತಾಂಡವ ಸ್ತೋತ್ರವನ್ನು ಬಳಸಲಾಗಿತ್ತು. ಈ ಮೂಲಕ ಪಾಕಿಸ್ತಾನಕ್ಕೆ ಯಾವ ಸಂದೇಶ ನೀಡಲು ಹೊರಟಿದ್ದೀರಿ’ ಎಂದು ಪ್ರಶ್ನಿಸಿದರು.
ಯಾವುದೇ ಕಾಗದಪತ್ರಗಳಿಲ್ಲದೆಯೇ, ಏರ್ ಮಾರ್ಷಲ್ ಅವರು ‘ವಿನಯ್ ನ ಮಾನತ್ ಜಲ್ದಿ ಜಡ್, ಭಯೆ ತೀನ್ ದಿನ್ ಭೀತ್, ಭೋಲೆ ರಾಮ್ ಸಕೋಪ್ ತಬ್, ಭಾಯ್ ಬಿನ್ ಹೋಯ್ ನ ಪ್ರೀತ್’ (ಲಂಕೆಗೆ ತೆರಳಲು ಸಮುದ್ರರಾಜ ಜಾಗ ಬಿಡುತ್ತಾನೆ ಎಂದು ಕಾದು ಕಾದು ರಾಮನಿಗೆ ಕೋಪ ಬಂದಿತು. ಮೂರು ದಿನ ಆದರೂ ಈ ಜಲ ಮಾತು ಕೇಳುತ್ತಿಲ್ಲ ಎಂದು ಕೋಪಗೊಂಡು ಭಯವಿಲ್ಲದೆ ಸ್ನೇಹವೂ ಇಲ್ಲ ಎನ್ನುತ್ತ ಬಿಲ್ಲನ್ನು ಏರಿಸುತ್ತಾನೆ. ಆಗ ಸಮುದ್ರರಾಜ ಪ್ರತ್ಯಕ್ಷವಾಗಿ ಸಹಾಯಹಸ್ತ ಚಾಚುತ್ತಾನೆ) ಎಂಬ ದ್ವಿಪದಿಯನ್ನು ಉಲ್ಲೇಖಿಸಿದರು.
‘ಏನು ಸಂದೇಶ ಕೊಡಲಾಗುತ್ತಿದೆ... ಅಂದರೆ, ಬುದ್ಧಿವಂತ ವ್ಯಕ್ತಿಗೆ ಸಣ್ಣ ಸುಳಿವು ಸಾಕು’ ಎಂದು ಭಾರ್ತಿ ಹೇಳಿದರು. ಆಗ ಪತ್ರಕರ್ತರು ಜೋರಾಗಿ ಚಪ್ಪಾಳೆ ತಟ್ಟಿದರು.
ಸುದ್ದಿಗೋಷ್ಠಿ ಆರಂಭಕ್ಕೆ ಮುನ್ನ ದೊಡ್ಡ ಪರದೆಯ ಮೇಲೆ ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರು ಕರ್ಣನ ಕುರಿತು ರಚಿಸಿರುವ ʼರಶ್ಮಿರಥಿʼ ಖಂಡಕಾವ್ಯದ ‘ಕೃಷ್ಣನ ಎಚ್ಚರಿಕೆ’ ಪದ್ಯವನ್ನು ಪ್ರದರ್ಶಿಸಲಾಯಿತು.
‘ಜಬ್ ನಾಶ್ ಮನುಜ್ ಪೆ ಛಾತಾ ಹೈ, ಪೆಹಲೆ ವಿವೇಕ್ ಮರ್ ಜಾತಾ ಹೈ....ಹಿತ್-ವಚನ್ ತುನೇ ನಹೀಂ ಮಾನ, ಮೈತ್ರಿ ಕಾ ಮೂಲ್ಯ ನಹೀಂ ಪೆಹಚಾನಾ,.... ಅಂತಿಮ್ ಸಂಕಲ್ಪ ಸುನಾತಾ ಹು. ಯಾಚನಾ ನಹೀಂ ಅಬ್ ರಣ್ ಹೋಗಾ, ಜೀವನ್ ಜೈ ಯಾ ಕಿ ಮರಣ್ ಹೋಗಾ’ (ಮನುಷ್ಯನ ಮೇಲೆ ನಾಶ ಆವರಿಸಿಕೊಂಡಾಗ ವಿವೇಕ ಸತ್ತುಹೋಗುತ್ತದೆ. ನೀವು ಹಿತವಚನವನ್ನು ಕೇಳಲಿಲ್ಲ. ಮೈತ್ರಿಯ ಮೌಲ್ಯವನ್ನು ಅರಿಯಲಿಲ್ಲ. ಈಗ ಅಂತಿಮ ಸಂಕಲ್ಪ ತಿಳಿಸುತ್ತೇನೆ. ಈಗ ಯಾಚನೆಯಲ್ಲ, ಯುದ್ಧವಾಗುತ್ತದೆ. ಜೀವನ ಅಥವಾ ಮರಣವಾಗುತ್ತದೆ’) ಎಂಬುದು ಈ ಪದ್ಯ. ಈ ಹಾಡಿಗೆ ಭಾರತೀಯ ಸೇನೆಯ ಕ್ಷಿಪಣಿಗಳು, ನೌಕಾ ವೇದಿಕೆಗಳು, ಶಸ್ತ್ರಾಸ್ತ್ರ ವ್ಯವಸ್ಥೆ, ವಾಯು ರಕ್ಷಣಾ ವ್ಯವಸ್ಥೆಯ ಚಿತ್ರಗಳೊಂದಿಗೆ ಜೋಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.