
ನವದೆಹಲಿ: ಕಾರು ಪ್ರತಿಷ್ಠೆಯ ಸಂಕೇತವಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮಂಗಳವಾರ ಹೇಳಿದರು.
ದೆಹಲಿ–ಎನ್‌ಸಿಆರ್‌ನಲ್ಲಿನ ವಾಯುಮಾಲಿನ್ಯದ ಕುರಿತಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆ ಆಗಿರುವ ಅರ್ಜಿಗಳ ವಿಚಾರಣೆ ವೇಳೆ, ‘ಜನರು ಬೈಸಿಕಲ್‌ನಲ್ಲಿ ಓಡಾಡುವುದನ್ನು ನಿಲ್ಲಿಸಿದ ಬಳಿಕ ನಾಲ್ಕು ಚಕ್ರದ ವಾಹನ ಖರೀದಿಗಾಗಿ ಹಣ ಉಳಿಸುತ್ತಿದ್ದಾರೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಹಲವು ಕಾರುಗಳನ್ನು ಹೊಂದುವುದನ್ನು ಕಡಿತಗೊಳಿಸುವ ಮೂಲಕವೂ ವಾಯು ಮಾಲಿನ್ಯವನ್ನೂ ತಗ್ಗಿಸಬಹುದು ಎಂದು ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು ಸಲಹೆ ನೀಡಿದ ಬಳಿಕ, ಸಿಜೆಐ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
‘ಶ್ರೀಮಂತರೂ ತ್ಯಾಗಕ್ಕೆ ಮುಂದಾಗಬೇಕು. ಹೈಎಂಡ್ ವಾಹನಗಳನ್ನು ಆಯ್ದುಕೊಳ್ಳುವ ಬದಲು ಉತ್ತಮ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬೇಕು’ ಎಂದು ಸೂರ್ಯಕಾಂತ್ ಹೇಳಿದರು.
ವಾಯು ಗುಣಮಟ್ಟ ನಿರ್ವಹಣಾ ಆಯೋಗವು (ಸಿಎಕ್ಯೂಎಂ) ತನ್ನ ಕರ್ತವ್ಯ ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಸಿಎಕ್ಯೂಎಂನ ಕಾರ್ಯವಿಧಾನದಲ್ಲಿನ ‘ಗಂಭೀರತೆ’ಯ ಕೊರತೆಯನ್ನು ಟೀಕಿಸಿದ ನ್ಯಾಯಾಲಯವು, ಹದಗೆಡುತ್ತಿರುವ ವಾಯು ಗುಣಮಟ್ಟ ಸೂಚ್ಯಂಕದ (ಎಕ್ಯೂಐ) ಕಾರಣಗಳನ್ನು ಪತ್ತೆಹಚ್ಚುವಲ್ಲಿ ಅಥವಾ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳುವಲ್ಲಿ ಯಾವುದೇ ಆತುರವಿಲ್ಲ ಎಂದಿತು.
ಎರಡು ವಾರಗಳಲ್ಲಿ ತಜ್ಞರ ಸಭೆ ಕರೆದು ವಾಯುಮಾಲಿನ್ಯದ ಮಟ್ಟವು ಅತಿಯಾಗಲು ಪ್ರಮುಖ ಕಾರಣಗಳ ಬಗ್ಗೆ ವರದಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಸಿಎಕ್ಯೂಎಂಗೆ ಸೂಚಿಸಿತು.
ಮಂಡಳಿಗೆ ತರಾಟೆ
ಸಂಚಾರ ದಟ್ಟಣೆಯನ್ನು ತಗ್ಗಿಸಲಿಕ್ಕಾಗಿ ದೆಹಲಿಯ ಗಡಿಯಲ್ಲಿರುವ ಟೋಲ್ ಪ್ಲಾಜಾಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕೋ ಅಥವಾ ಸ್ಥಳಾಂತರಿಸಬೇಕೋ ಎಂಬುದರ ಕುರಿತಂತೆ ವರದಿ ನೀಡುವಂತೆ ಸೂಚಿಸಿದ್ದರೂ ಸೂಕ್ತ ಸ್ಪಂದನ ನೀಡದೆ ಮತ್ತೆ ಎರಡು ತಿಂಗಳು ಸಮಯ ಕೋರಿರುವ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.