ADVERTISEMENT

ವಾಯು ಮಾಲಿನ್ಯ ನಿಯಂತ್ರಿಸಿದ ಕೋವಿಡ್‌!

ಎರಡು ದಶಕದಲ್ಲೇ ಅತ್ಯಂತ ಕಡಿಮೆ: ನಾಸಾ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 20:15 IST
Last Updated 23 ಏಪ್ರಿಲ್ 2020, 20:15 IST
2016ರಿಂದ 2020ರ ವರೆಗೆ ಮಾಲಿನ್ಯ ಪ್ರಮಾಣದ ತೋರಿಸುವ ನಕಾಶೆಗಳು. – ನಾಸಾ ಚಿತ್ರಗಳು
2016ರಿಂದ 2020ರ ವರೆಗೆ ಮಾಲಿನ್ಯ ಪ್ರಮಾಣದ ತೋರಿಸುವ ನಕಾಶೆಗಳು. – ನಾಸಾ ಚಿತ್ರಗಳು   

ಮುಂಬೈ: ಕಳೆದ ಎರಡು ದಶಕದಲ್ಲಿಯೇ ಭಾರತ ಅತ್ಯಂತ ಕಡಿಮೆ ವಾಯು ಮಾಲಿನ್ಯ ಕಂಡಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ತಿಳಿಸಿದೆ.

ನಾಸಾ ತಂಡದ ಸದಸ್ಯರು ಮತ್ತು ವಿಶ್ವವಿದ್ಯಾಲಯಗಳ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಯುಎಸ್‌ಆರ್‌ಎ) ‍ಪವನ್‌ ಗುಪ್ತಾ ಅವರು ಅಮೆರಿಕದ ‘ಮಾರ್ಷಲ್‌ ಸ್ಪೇಸ್‌ ಫ್ಲೈಟ್‌ ಕೇಂದ್ರ’ದಲ್ಲಿ ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ಕೋವಿಡ್‌–19ನಿಂದಾಗಿ ಲಾಕ್‌ಡೌನ್‌ ಘೋಷಿಸಿದ ಬಳಿಕ ಎಲ್ಲ ರೀತಿಯ ಚಟುವಟಿಕೆಗಳು ಸ್ಥಗಿತಗೊಂಡ ಪರಿಣಾಮ ಉತ್ತರ ಭಾರತದಲ್ಲಿ ಕಳೆದ 20 ವರ್ಷಗಳಲ್ಲೇ ‘ಏರೋಸಾಲ್‌’ಗಳ ಮಟ್ಟದಲ್ಲಿ ತೀವ್ರ ಕುಸಿತ ಕಂಡಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ADVERTISEMENT

ಘನೀಕೃತ ಮತ್ತು ದ್ರುವಿಕೃತ ವಾಯುಕಣಗಳೇ ಏರೊಸಾಲ್‌ಗಳು. ವಸ್ತುಗಳು ಸ್ಪಷ್ಟವಾಗಿ ಗೋಚರಿಸದಂತಹ ವಾತಾವರಣಕ್ಕೆ ಈ ವಾಯು ಕಣಗಳು ಕಾರಣವಾಗುತ್ತವೆ . ಜತೆಗೆ ಶ್ವಾಸಕೋಶ ಹಾಗೂ ಹೃದಯಕ್ಕೆ ಹಾನಿ ಮಾಡುತ್ತವೆ. ಕೆಲವು ಏರೋಸಾಲ್‌ಗಳಿಗೆ ನೈಸರ್ಗಿಕ ಮೂಲಗಳಿವೆ. ಬಿರುಗಾಳಿ, ಜ್ವಾಲಾಮುಖಿ ಸ್ಫೋಟ, ಕಾಳ್ಗಿಚ್ಚುಗಳಿಂದಲೂ ಏರೋಸಾಲ್‌ಗಳು ಸೃಷ್ಟಿಯಾಗುತ್ತವೆ. ಉಳಿದವು ಮನುಷ್ಯರ ಚಟುವಟಿಕೆಗಳಿಂದ ಸೃಷ್ಟಿಯಾಗುತ್ತಿದ್ದು, ಇವುಗಳಿಂದಲೇ ಆರೋಗ್ಯಕ್ಕೆ ಅತಿ ಹೆಚ್ಚು ಹಾನಿಯಾಗುತ್ತಿದೆ.

ಭಾರತದ ನಗರಗಳಲ್ಲಿ ಪ್ರತಿವರ್ಷ ಮಾನವ ನಿರ್ಮಿತ ಮೂಲಗಳಿಂದಲೇ ವಾಯು ಮಾಲಿನ್ಯ ಹೆಚ್ಚಾಗುತ್ತಿತ್ತು. ಇದರಿಂದ, ಏರೋಸಾಲ್‌ ಮಟ್ಟವೂ ಹೆಚ್ಚಾಗುತ್ತಿತ್ತು.

‘ಲಾಕ್‌ಡೌನ್‌ ಸಂದರ್ಭದಲ್ಲಿ ವಾತಾವರಣದಲ್ಲಿ ಬದಲಾವಣೆ ಕಾಣುತ್ತವೆ ಎನ್ನುವುದು ನಮಗೆ ಗೊತ್ತಿತ್ತು. ಆದರೆ, ಇಷ್ಟೊಂದು ಪ್ರಮಾಣವನ್ನು ಊಹಿಸಿರಲಿಲ್ಲ’ ಎಂದು ಗುಪ್ತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.